

ನವದೆಹಲಿ: ಲೆಫ್ಟಿನೆಂಟ್ ಜನರಲ್ ಮನೋಜ್ ಪಾಂಡೆಯವರನ್ನು ಭೂಸೇನೆಯ ಹೊಸ ಮುಖ್ಯಸ್ಥರನ್ನಾಗಿ ನೇಮಕ ಮಾಡಲಾಗಿದೆ. ಹಾಲಿ ಮುಖ್ಯಸ್ಥ ಜನರಲ್ ಎಂ.ಎಂ. ನರವಣೆ ಈ ಮಾಸಾಂತ್ಯಕ್ಕೆ ನಿವೃತ್ತರಾಗಲಿದ್ದು, ಅವರು ಮೂರೂ ಸೇನಾ ಪಡೆಗಳ ಮಹಾ ದಂಡನಾಯಕ (ಸಿಡಿಎಸ್) ಆಗಿ ನೇಮಕಗೊಳ್ಳುವ ಸಾಧ್ಯತೆ ಇದೆ. ಸಿಡಿಎಸ್ ಆಗಿದ್ದ ಜನರಲ್ ಬಿಪಿನ್ ರಾವತ್ ಕಳೆದ ಡಿಸೆಂಬರ್ನಲ್ಲಿ ಊಟಿ ಬಳಿಯ ವೆಲ್ಲಿಂಗ್ಟನ್ನಲ್ಲಿ ಸಂಭವಿಸಿದ ಹೆಲಿಕಾಪ್ಟರ್ ದುರಂತದಲ್ಲಿ ಸಾವನ್ನಪ್ಪಿದರು.
ಇಂಜಿನಿಯರ್ ರೆಜಿ: ಮೆಂಟ್ನ ನೇತೃತ್ವ ವಹಿಸಿರುವ ಪಾಂಡೆ, ಜನರಲ್ ನರವಣೆಯವರ ನಂತರ ಸೇನೆಯಲ್ಲಿ ಅತ್ಯಂತ ಹಿರಿಯರಾಗಿರುವುದರಿಂದ ಪಡೆಯ ಚುಕ್ಕಾಣಿಯನ್ನು ಹಿಡಿಯಲಿದ್ದಾರೆ. ಕಳೆದ ಮೂರು ತಿಂಗಳಲ್ಲಿ ಅನೇಕ ಹಿರಿಯ ಅಧಿಕಾರಿಗಳು ನಿವೃತ್ತರಾಗಿರುವುದರಿಂದ ಪಾಂಡೆ, ಅತ್ಯಂತ ಹಿರಿಯ ಅಧಿಕಾರಿಯಾಗಿದ್ದಾರೆ.
ಪದಕಗಳ ಮಾಲೆ: ಪರಮ ವಿಶಿಷ್ಟ ಸೇವಾ ಪದಕ, ಅತಿ ವಿಶಿಷ್ಟ ಸೇವಾ ಪದಕ, ವಿಶಿಷ್ಟ ಸೇವಾ ಪದಕ, ಚೀಫ್ ಆಫ್ ಆರ್ವಿು ಸ್ಟಾಫ್ ಕಮೆಂಡೇಷನ್ ಮತ್ತು ಜಿಒಸಿ-ಇನ್-ಸಿ ಕಮೆಂಡೇಶನ್ ಮೊದಲಾದ ಗೌರವಗಳು ಪಾಂಡೆ ಕೊರಳನ್ನು ಅಲಂಕರಿಸಿವೆ.
ಬಾಂಬೆ ಸ್ಯಾಪರ್ಸ್ಗೆ ಸೇರ್ಪಡೆ: 1982ರ ಡಿಸೆಂಬರ್ನಲ್ಲಿ ಬಾಂಬೆ ಸ್ಯಾಪರ್ಸ್ಗೆ ಸೇರ್ಪಡೆ ಯಾಗುವ ಮೂಲಕ ಮನೋಜ್ ಪಾಂಡೆ ಸೇನೆಯಲ್ಲಿ ಕಾರ್ಯ ಆರಂಭಿಸಿದ್ದರು. 40 ವರ್ಷಗಳ ಈ ಸುದೀರ್ಘ ಅವಧಿಯಲ್ಲಿ ಅವರು ಅನೇಕ ಪ್ರತಿಷ್ಠಿತ ಕಾರ್ಯಾಚರಣೆಗಳ ನೇತೃತ್ವ ವಹಿಸಿದ್ದರು. ಸಾಂಪ್ರದಾಯಿಕ ಹಾಗೂ ಬಂಡುಕೋರ ನಿಗ್ರಹ ಕಾರ್ಯಾಚರಣೆಗಳೆರಡರಲ್ಲೂ ಆವರು ಅಪಾರ ಅನುಭವವನ್ನು ಹೊಂದಿದ್ದಾರೆ.