ಮನ್ ಕಿ ಬಾತ್ 124; ಪ್ರಾಚೀನ ಕಲೆ ಸಂರಕ್ಷಿಸುತ್ತಿರುವ ಮಣಿ ಮಾರನ್​ಗೆ ಮೋದಿ ಶ್ಲಾಘನೆ | Mann Ki Baat

Untitled design (22) (1)
Published on

Mann Ki Baat: ತಮಿಳು ತಾಳೆಗರಿ ಹಸ್ತಪ್ರತಿಗಳನ್ನು ಸಂರಕ್ಷಿಸುವ ಮತ್ತು ಕಲಿಸುವ ಧ್ಯೇಯವನ್ನು ಕೈಗೆತ್ತಿಕೊಂಡಿರುವ ತಮಿಳುನಾಡಿನ ತಂಜಾವೂರಿನ ಮಣಿ ಮಾರನ್ ಅವರ ಪ್ರಯತ್ನಗಳನ್ನು ಪ್ರಧಾನಿ ನರೇಂದ್ರ ಮೋದಿ ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ.

ಮನ್ ಕಿ ಬಾತ್' 124 ನೇ ಸಂಚಿಕೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ, ಭಾರತದ ಶ್ರೀಮಂತ ಬೌದ್ಧಿಕ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಹೇಗೆ ರಕ್ಷಿಸಬೇಕು ಎಂಬುದಕ್ಕೆ ಮಣಿ ಮಾರನ್ ಅವರು ಒಂದು ನೈಜ ಉದಾಹರಣೆ ಎಂದರು.

ಇಂದಿನ ಪೀಳಿಗೆ ತಮಿಳು ಹಸ್ತಪ್ರತಿಗಳನ್ನು ಓದಲು ಕಲಿಯದಿದ್ದರೆ, ಭವಿಷ್ಯದಲ್ಲಿ ಈ ಅಮೂಲ್ಯ ಪರಂಪರೆ ಕಳೆದುಹೋಗುತ್ತದೆ ಎಂದು ಭಾವಿಸಿ ಮಾರನ್ ಸಂಜೆ ತರಗತಿಗಳನ್ನು ಪ್ರಾರಂಭಿಸಿದ್ದಾರೆ. ಅಲ್ಲಿ ವಿದ್ಯಾರ್ಥಿಗಳು, ದುಡಿಯುವ ಯುವಕರು ಮತ್ತು ಸಂಶೋಧಕರು ಕಲಿಯಲು ಆಸಕ್ತಿ ತೋರಿದ್ದಾರೆ ಎಂದು ಮೋದಿ ತಿಳಿಸಿದರು.

ತಾಳೆಗರಿ ಹಸ್ತಪ್ರತಿಗಳಲ್ಲಿ ಬಳಸುವ ಸಾಂಪ್ರದಾಯಿಕ ತಮಿಳು ಸುವಾದಿಯಯಲ್ ಲಿಪಿಯನ್ನು ಜನರಿಗೆ ಓದುವುದು ಹೇಗೆಂದು ಕಲಿಸಲು ಮಣಿ ಮಾರನ್ ಶ್ರಮ ಪಡುತ್ತಿದ್ದಾರೆ. ಶತಮಾನಗಳಷ್ಟು ಹಳೆಯದಾದ ಈ ಹಸ್ತಪ್ರತಿಗಳು ವಿಜ್ಞಾನ, ಔಷಧ, ಸಂಗೀತ ಮತ್ತು ತತ್ವಶಾಸ್ತ್ರದ ಜ್ಞಾನದ ನಿಧಿಯನ್ನು ಹೊಂದಿವೆ. ಅನೇಕರು ಹಸ್ತಪ್ರತಿಗಳನ್ನು ಆಧರಿಸಿದ ಸಾಂಪ್ರದಾಯಿಕ ಔಷಧ ವ್ಯವಸ್ಥೆಗಳ ಬಗ್ಗೆ ಸಂಶೋಧನೆ ನಡೆಸಲು ಪ್ರಾರಂಭಿಸಿದ್ದಾರೆ ಎಂದರು.

ಕೇಂದ್ರ ಸರ್ಕಾರದಿಂದ ಹೊಸ ಯೋಜನೆ

ಭಾರತದ ನಿಜವಾದ ಶಕ್ತಿ ಶತಮಾನಗಳಿಂದ ಸಂರಕ್ಷಿಸಿರುವ ಜ್ಞಾನದಲ್ಲಿದೆ, ಅಂತಹ ಹಸ್ತಪ್ರತಿಗಳನ್ನು ರಕ್ಷಿಸುವುದು ರಾಷ್ಟ್ರೀಯ ಜವಾಬ್ದಾರಿಯಾಗಿದೆ, ಪ್ರಾಚೀನ ಜ್ಞಾನವು ಗೋಡೆಗಳೊಳಗೆ ಉಳಿಯುವುದಿಲ್ಲ, ಅದು ಹೊಸ ಪೀಳಿಗೆಯ ಪ್ರಜ್ಞೆಯ ಭಾಗವಾಗುತ್ತದೆ. ಈ ಚಿಂತನೆಯಿಂದ ಪ್ರೇರಿತರಾಗಿ, ಭಾರತ ಸರ್ಕಾರವು ಈ ವರ್ಷದ ಬಜೆಟ್‌ನಲ್ಲಿ 'ಜ್ಞಾನ ಭಾರತಂ ಮಿಷನ್' ಎಂಬ ಐತಿಹಾಸಿಕ ಉಪಕ್ರಮವನ್ನು ಘೋಷಿಸಿದ್ದು, ಈ ಧ್ಯೇಯದಡಿಯಲ್ಲಿ, ಪ್ರಾಚೀನ ಹಸ್ತಪ್ರತಿಗಳನ್ನು ಡಿಜಿಟಲೀಕರಣಗೊಳಿಸಲಾಗುತ್ತದೆ. ಬಳಿಕ ರಾಷ್ಟ್ರೀಯ ಡಿಜಿಟಲ್ ಭಂಡಾರವನ್ನು ರಚಿಸಲಾಗುತ್ತದೆ, ಅಲ್ಲಿ ಪ್ರಪಂಚದಾದ್ಯಂತದ ವಿದ್ಯಾರ್ಥಿಗಳು ಮತ್ತು ಸಂಶೋಧಕರು ಭಾರತದ ಜ್ಞಾನ ಸಂಪ್ರದಾಯದೊಂದಿಗೆ ಸಂಪರ್ಕ ಸಾಧಿಸಲು ಸಾಧ್ಯವಾಗುತ್ತದೆ ಎಂದು ಪ್ರಧಾನಿ ಮೋದಿ ಅಭಿಪ್ರಾಯಪಟ್ಟಿದ್ದಾರೆ.(ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net