ಮಣಿಪುರದಲ್ಲಿ ಶಾಂತಿ ಮರು ಸ್ಥಾಪನೆ ಪ್ರಯತ್ನವಾಗಲಿ: ಆರ್​​ಎಸ್ಎಸ್​ ಒತ್ತಾಯ

RSS Hosabale
Published on

ನವದೆಹಲಿ: ಜನಾಂಗೀಯ ಹಿಂಸಾಚಾರದಿಂದ ತತ್ತರಿಸುವ ಮಣಿಪುರದಲ್ಲಿ ಶಾಂತಿ ಮರು ಸ್ಥಾಪನೆಗಾಗಿ ಅಲ್ಲಿನ ಸರ್ಕಾರ, ಸ್ಥಳೀಯ ಆಡಳಿತ ಹಾಗೂ ಈಶಾನ್ಯ ರಾಜ್ಯದ ಜನರು ಮುಂದಾಗಬೇಕು ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್​ಎಸ್ಎಸ್​) ಒತ್ತಾಯಿಸಿದೆ. ವಿಶ್ವಾಸದ ಕೊರತೆ ನೀಗಿಸುವ ಹಾಗೂ ಪರಿಸ್ಥಿತಿ ತಿಳಿಗೊಳಿಸುವ ಉದ್ದೇಶವನ್ನೇ ಪ್ರಧಾನವಾಗಿ ಇರಿಸಿಕೊಂಡು ಕ್ರಮಕೈಗೊಳ್ಳಬೇಕು ಎಂದು ಆರ್​​ಎಸ್​ಎಸ್​ ಆಗ್ರಹಿಸಿದೆ.

ಈ ನಿಟ್ಟಿನಲ್ಲಿ ಆರ್​ಎಸ್ಎಸ್​ನ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಅವರ ಹೆಸರಿನಲ್ಲಿ ಅಧಿಕೃತ ಪ್ರಕಟಣೆ ಹೊರಡಿಸಲಾಗಿದ್ದು, ಮೇ 3ರಂದು ಲಾಲ್ ಹರೋಬಾ ಹಬ್ಬದ ಸಮಯದಲ್ಲಿ ಚುರಾಚಂದ್ಪುರದಲ್ಲಿ ಆಯೋಜಿಸಲಾದ ಪ್ರತಿಭಟನಾ ರ್ಯಾಲಿ ನಂತರ ಮಣಿಪುರದಲ್ಲಿ ಪ್ರಾರಂಭವಾದ ಹಿಂಸಾಚಾರ ಮತ್ತು ಅನಿಶ್ಚಿತತೆ ಖಂಡನೀಯ. ಮಣಿಪುರದಲ್ಲಿ ಕಳೆದ 45 ದಿನಗಳಿಂದ ನಡೆಯುತ್ತಿರುವ ನಿರಂತರ ಹಿಂಸಾಚಾರ ಅತ್ಯಂತ ಆತಂಕಕಾರಿ ಎಂದು ಅದರಲ್ಲಿ ಉಲ್ಲೇಖಿಸಲಾಗಿದೆ.

ಶತಮಾನಗಳಿಂದ ಪರಸ್ಪರ ಸಾಮರಸ್ಯ ಮತ್ತು ಸಹಕಾರದೊಂದಿಗೆ ಶಾಂತಿಯುತ ಜೀವನವನ್ನು ನಡೆಸುತ್ತಿರುವವರ ಮಧ್ಯೆ ಭುಗಿಲೆದ್ದ ಅಶಾಂತಿ ಮತ್ತು ಹಿಂಸಾಚಾರವು ಇನ್ನೂ ನಿಂತಿಲ್ಲ ಎಂಬುದು ತುಂಬಾ ದುರದೃಷ್ಟಕರ. ಯಾವುದೇ ಸಮಸ್ಯೆಗೆ "ಪರಸ್ಪರ ಚರ್ಚೆಗಳ" ಮೂಲಕ ಪರಿಹಾರ ಕಂಡುಕೊಳ್ಳಬಹುದು ಎಂಬ ವಿಶ್ವಾಸ ವ್ಯಕ್ತಪಡಿಸಿರುವ ಹೊಸಬಾಳೆ ಅವರು, ಹಿಂಸಾಚಾರದಿಂದ ಸ್ಥಾನಪಲ್ಲಟಗೊಂಡ ಜನರೊಂದಿಗೆ ಆರ್​ಎಸ್ಎಸ್​ ಇರುತ್ತದೆ ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net