ಈ ಹುಡುಗಿ ಕತ್ತಿ ತಿರುಗಿಸುತ್ತಿದ್ದರೆ ವೀರ ವನಿತೆಯರ ರಣರಂಗದಲ್ಲಿನ ಕಾದಾಟದ ದೃಶ್ಯ ನೆನಪಾಗುತ್ತೆ!

1194193
Published on

ಮಂಗಳೂರು: ಅಪ್ಪಟ ಭಾರತೀಯ ನಾರಿಯ ವಸ್ತ್ರ ತೊಟ್ಟು, ವೀರಗಚ್ಚೆ ಹಾಕಿ, ಕೈಯಲ್ಲಿ ಹರಿತವಾದ ಕತ್ತಿ ಹಿಡಿದು ನೆಲದಲ್ಲಿ ಪುಟಿಯುತ್ತ ಈ ಹುಡುಗಿ ಕತ್ತಿ ತಿರುಗಿಸುತ್ತಿದ್ದರೆ ನೋಡುಗರ ಮೈ ಜುಮ್ಮೆನ್ನುತ್ತದೆ. ಒಂದು ಕ್ಷಣ ನಮ್ಮ ದೇಶದ ವೀರ ವನಿತೆಯರ ರಣರಂಗದಲ್ಲಿನ ಕಾದಾಟದ ದೃಶ್ಯಗಳು ಕಣ್ಣ ಮುಂದೆ ಹಾದು ಹೋಗುತ್ತವೆ.

ಈ ಹುಡುಗಿಯ ಹೆಸರು ವೆನಿಲ್ಲಾ. 21 ವರ್ಷ ಪ್ರಾಯದ ಈಕೆ ಬಂಟ್ವಾಳ ತಾಲೂಕಿನ ಕುರ್ನಾಡು ಗ್ರಾಮದ ನೀಲಕಂಠ - ಸುಮತಿ ದಂಪತಿಯ ಪುತ್ರಿ. ಇತ್ತೀಚೆಗೆ ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಸಿಲಂಬಂ ಸ್ಪರ್ಧೆಯಲ್ಲಿ 2 ಚಿನ್ನದ ಪದಕ ಗೆದ್ದಿದ್ದಾಳೆ.

ಬಾಲ್ಯದಿಂದಲೇ ಕರಾಟೆ, ಜೂಡೋ, ಬಾಕ್ಸಿಂಗ್, ಸ್ಕೇಟಿಂಗ್, ಯೋಗ, ಬಿಲ್ವಿದ್ಯೆ, ಸಿಲಂಬಂ ಮೊದಲಾದ ಮಾರ್ಷಲ್ ಆರ್ಟ್ಸ್‌ ಕರಗತ ಮಾಡಿಕೊಂಡಿದ್ದಾಳೆ. ನೋಡುಗರ ಮೈನವಿರೇಳಿಸುವಂತೆ ಲೀಲಾಜಾಲವಾಗಿ ಪ್ರದರ್ಶನ ನೀಡುತ್ತಾಳೆ. ಜನವರಿಯಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಲು ಆಯ್ಕೆಯಾಗಿದ್ದಾಳೆ.

ಹವ್ಯಾಸಕ್ಕಾಗಿ ಕಲಿತ ವಿದ್ಯೆ ಇಂದು ಬದುಕಿಗೂ ದಾರಿದೀಪವಾಗಿದೆ. ತಾನೂ ಕಲಿಯುತ್ತ, ಇತರರಿಗೂ ಕಲಿಸುತ್ತ ಕ್ರೀಡಾ ಕ್ಷೇತ್ರದಲ್ಲಿ ಭರವಸೆಯ ಕ್ರೀಡಾಪಟುವಾಗಿ ಗುರುತಿಸಿಕೊಂಡಿದ್ದಾಳೆ. ತರಬೇತಿ ನೀಡಿ ಬರುವ ಆದಾಯದಿಂದ ತನ್ನ ವಿದ್ಯಾಭ್ಯಾಸ ನಡೆಸುತ್ತಿದ್ದು, ಮನೆಗೂ ಆಧಾರಸ್ತಂಭವಾಗಿದ್ದಾಳೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net