

ಮುಂಬೈ: ಹಿಂದಿ ಬಿಗ್ ಬಾಸ್ 15ನೇ ಆವೃತ್ತಿಗೆ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಮತ್ತೆ ನೃತ್ಯಗಾರ್ತಿ ಹಾಗೂ ನಟಿ ರಾಖಿ ಸಾವಂತ್ ಎಂಟ್ರಿ ಕೊಡಲಿದ್ದಾರೆ. ವಿಶೇಷವೆಂದರೆ, ತಮ್ಮ ವಿಶಿಷ್ಟ ಹಾವಭಾವಕ್ಕೆ ಹೆಸರಾಗಿರುವ ರಾಖಿ ಈ ಬಾರಿ ತಮ್ಮ ಜೊತೆ ಪತಿ ರಿತೇಶ್ರನ್ನೂ ಬಿಗ್ ಬಾಸ್ ಮನೆಗೆ ಕರೆದೊಯ್ಯಲಿದ್ದಾರೆ ಎನ್ನಲಾಗಿದೆ.
ಬಿಗ್ ಬಾಸ್ ಆರಂಭಿಕ ಆವೃತ್ತಿಯಲ್ಲಿ ಗಮನ ಸೆಳೆದಿದ್ದ ರಾಖಿ ಕಳೆದ ಬಾರಿ(ಬಿಗ್ಬಾಸ್ 14) ಕೂಡ ವೈಲ್ಡ್ ಕಾರ್ಡ್ ಮೂಲಕ ಪ್ರವೇಶ ಗಳಿಸಿದ್ದರು. ಫೈನಲ್ ತಲುಪಿದ ನಂತರ 14 ಲಕ್ಷ ರೂಪಾಯಿಗಳೊಂದಿಗೆ ಶೋನಿಂದ ಹೊರಬಂದಿದ್ದರು. ಆದರೆ ಈ ಬಾರಿ ತಾವು ಹಣದ ಚೀಲದೊಂದಿಗೆ ಆಚೆ ಬರುವುದಿಲ್ಲ ಎಂದು ಅವರು ಹೇಳಿದ್ದಾರೆ.
ಎನ್ಆರ್ಐ ಬಿಸಿನೆಸ್ಮನ್ ರಿತೇಶ್ರನ್ನು ಮದುವೆಯಾದಾಗಿನಿಂದ ಅವರ ಬಗ್ಗೆ ಹೆಚ್ಚು ಗುಟ್ಟು ಬಿಟ್ಟುಕೊಡದ ರಾಖಿ ಇದೀಗ ಅವರೊಂದಿಗೆ ಬಿಗ್ ಬಾಸ್ನ ಭೂತಗಾಜಿನ ಮೂಲಕ ಕಾಣಿಸಿಕೊಳ್ಳಲಿದ್ದಾರೆ. "ಈ ಬಾರಿ ನಾನು ಸೊಸೆಯಾಗಿ, ಧರ್ಮಪತ್ರಿಯಾಗಿ, ಸಂಗಾತಿಯಾಗಿ ಮತ್ತು ಕಲಾವಿದೆಯಾಗಿ ಪಾಲ್ಗೊಳ್ಳುತ್ತಿದ್ದೇನೆ. ಜನತೆಯ ಮತ್ತು ಮಾಧ್ಯಮದ ಪ್ರೀತಿಯೊಂದಿಗೆ ಟ್ರೋಫಿ ನನ್ನದಾಗಿಸಿಕೊಳ್ಳಲು ಇಚ್ಛಿಸುತ್ತೇನೆ" ಎಂದಿದ್ದಾರೆ. (ಏಜೆನ್ಸೀಸ್)