

ಬೆಂಗಳೂರು: ಹಾನಗಲ್ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾದ ಶ್ರೀನಿವಾಸ ಮಾನೆ ಪ್ರಮಾಣ ವಚನ ಕಾರ್ಯಕ್ರಮದ ವೇಳೆ ಗೈರಾಗಿ ಹೈಡ್ರಾಮಾ ನಡೆಸಿದ ಪ್ರಸಂಗ ಗುರುವಾರ ವಿಧಾನಸೌಧದಲ್ಲಿ ನಡೆಯಿತು. ನಿಗದಿತ ಸಮಯದ ಬಳಿಕ ಪ್ರಮಾಣ ವಚನ ಕೊಡಿ ಎಂಬ ಕೋರಿಕೆಗೆ ಸ್ಪೀಕರ್ ಮಾನ್ಯ ಮಾಡದೆ ಇದ್ದುದರಿಂದ, ‘ಇದು ಹಾನಗಲ್ ಸೋಲಿನ ಆಕ್ರೋಶ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸಭಾಧ್ಯಕ್ಷರ ವಿರುದ್ಧವೇ ಹರಿಹಾಯ್ದವೂ ಪ್ರಸಂಗ ನಡೆಯಿತು.
ಇತ್ತೀಚೆಗೆ ನಡೆದ ಎರಡು ಉಪಚುನಾವಣೆಯಲ್ಲಿ ಗೆಲುವು ಸಾಧಿಸಿದ ಶಾಸಕರ ಪ್ರಮಾಣ ವಚನ ಕಾರ್ಯಕ್ರಮ ವಿಧಾನಸೌಧ ಸಮ್ಮೇಳನ ಸಭಾಂಗಣದಲ್ಲಿ ಗುರುವಾರ ಬೆಳಗ್ಗೆ 11ಕ್ಕೆ ನಿಗದಿಯಾಗಿತ್ತು. ಸಿಂದಗಿ ಶಾಸಕ ಭೂಸನೂರ್ ಮಾತ್ರ ಪ್ರಮಾಣ ವಚನ ಸ್ವೀಕರಿಸಿದರು. ಆರಂಭದಲ್ಲಿ ವಿಧಾನಸೌಧದಲ್ಲಿ ಕಾಣಿಕೊಂಡಿದ್ದ ಶ್ರೀನಿವಾಸ ಮಾನೆ ಏಕಾಏಕಿ ನಾಪತ್ತೆಯಾದರು. ಪ್ರತಿಜ್ಞೆ ಸ್ವೀಕರಿಸುವಂತೆ ವಿಧಾನಸಭೆ ಕಾರ್ಯದರ್ಶಿ ಮೈಕ್ ಮೂಲಕ ಮಾನೆ ಅವರನ್ನು ಆಹ್ವಾನಿಸಿದರೂ ಅವರು ಬರಲಿಲ್ಲ. ಅಲ್ಲೇ ಇದ್ದ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಹಾಗೂ ಸ್ಪೀಕರ್ ಕಚೇರಿ ಸಿಬ್ಬಂದಿ ಮೊಬೈಲ್ ಮೂಲಕ ಕರೆ ಮಾಡಿ ಸ್ಪೀಕರ್ ಕರೆಯುತ್ತಿದ್ದಾರೆ ಬನ್ನಿ ಎಂದು ಕರೆಸುವ ಪ್ರಯತ್ನ ಮಾಡಿದರು. ಮಾನೆ ಮಾತ್ರ ಸ್ಪಂದಿಸಲಿಲ್ಲ.
ಈ ನಡುವೆ, ಸ್ಪೀಕರ್ ಅವರು ಮಾನೆ ನಡವಳಿಕೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಕೆಲ ನಿಮಿಷಗಳ ಕಾದ ಬಳಿಕ ಮತ್ತೊಮ್ಮೆ ಮೈಕ್ನಲ್ಲಿ ಕಾರ್ಯದರ್ಶಿ ಮಾನೆಗೆ ಆಹ್ವಾನ ನೀಡಿದರು. ಆಗಲೂ ಬಾರದೆ ಇದ್ದುದರಿಂದ ಕಾರ್ಯಕ್ರಮ ಮುಕ್ತಾಯಕ್ಕೆ ಸೂಚಿಸಿದರು. ಕಾರ್ಯಕ್ರಮ ಮುಗಿದು ಅರ್ಧಗಂಟೆ ತರುವಾಯ ವಿಧಾನಸೌಧಕ್ಕೆ ಆಗಮಿಸಿದ ಡಿಕೆಶಿ ಹಾಗೂ ಮಾನೆ ಸ್ಪೀಕರ್ ಕೊಠಡಿಗೆ ತೆರಳಿ ಪ್ರಮಾಣ ವಚನಕ್ಕೆ ಈಗ ವ್ಯವಸ್ಥೆ ಮಾಡುವಂತೆ ವಿಧಾನಸಭೆ ಕಾರ್ಯದರ್ಶಿಯನ್ನು ಕೋರಿದರು. ಅಷ್ಟರಲ್ಲಿ ಸ್ಪೀಕರ್ ವಿಧಾನಸೌಧ ಬಿಟ್ಟು ತೆರಳಿದ್ದರು. ಡಿ.ಕೆ.ಶಿವಕುಮಾರ್ ಸ್ಪೀಕರ್ಗೆ ಕರೆ ಮಾಡಿ, ಬನ್ನಿ ಮಾನೆಗೆ ಪ್ರಮಾಣ ವಚನ ಕೊಡಿ ಎಂದು ಕೋರಿದರು. ಪೂರ್ವ ನಿರ್ಧರಿತ ಕಾರ್ಯಕ್ರಮ ಹಿನ್ನೆಲೆ ಈಗ ಬರಲು ಸಾಧ್ಯವಿಲ್ಲ ಎಂದು ಉತ್ತರಿಸಿದರು. ಇದರಿಂದ ಡಿಕೆಶಿ ಕಸಿವಿಸಿಗೊಂಡು ವಿಚಲಿತರಾದರು.
ನನಗೇನು ಬೇಸರ ಇಲ್ಲ. ಅವರು ಯಾವಾಗ ಪ್ರಮಾಣ ವಚನಕ್ಕೆ ದಿನ ನಿಗದಿ ಮಾಡುತ್ತಾರೋ ಆಗಲೇ ಬರುತ್ತೇವೆ. ನಮ್ಮ ಅಧ್ಯಕ್ಷರು ಜತೆಗಿರಬೇಕಿತ್ತು, ಮಳೆ ಇದ್ದಿದ್ದರಿಂದ ಅವರು ಬರುವುದು ತಡವಾಯಿತು.
| ಶ್ರೀನಿವಾಸ ಮಾನೆ ನೂತನ ಶಾಸಕ