

ಮಂಡ್ಯ: ಜಾತ್ರೆಯಲ್ಲಿ ರಾಸುಗಳಿಗೆ ನೀಡುವ ಬಹುಮಾನದಲ್ಲಿ ತನಗೆ ಅನ್ಯಾಯವಾಗಿದೆ ಎಂದು ಆರೋಪಿಸಿದ ಯುವಕನೋರ್ವ ಶಾಸಕ ದರ್ಶನ್ ಪುಟ್ಟಣ್ಣಯ್ಯ ನಿವಾಸದ ಎದುರು ಎತ್ತುಗಳನ್ನು ಕಟ್ಟಿಹಾಕಿ ಪ್ರತಿಭಟನೆ ನಡೆಸಿದ ಘಟನೆ ಪಾಂಡವಪುರ ತಾಲೂಕಿನ ಬೇಬಿಬೆಟ್ಟದಲ್ಲಿ ವರದಿಯಾಗಿದೆ.
ಕ್ಯಾತನಹಳ್ಳಿ ಗ್ರಾಮದ ನಿವಾಸಿ ಪುನೀತ್‌ಕುಮಾರ್ ಎಂಬಾತ ಇದೇ ಗ್ರಾಮದಲ್ಲಿರುವ ದರ್ಶನ್ ಪುಟ್ಟಣ್ಣಯ್ಯ ಅವರ ನಿವಾಸದ ಎದುರು ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದ್ದಾನೆ. ಜಾತ್ರೆಯಲ್ಲಿ ರಾಸುಗಳಿಗೆ ನೀಡುವ ಬಹುಮಾನ ವಿಚಾರದಲ್ಲಿ ಶಾಸಕರು ರಾಜಕೀಯ ಮಾಡಿದ್ದಾರೆ. 3.50 ಲಕ್ಷ ರೂ. ಬೆಲೆಬಾಳುವಂತಹ ನಾಲ್ಕು ವಿಭಾಗದ ರಾಸುಗಳನ್ನು ಕಟ್ಟಿದ್ದೇನೆ. ಆದರೆ ನಮಗಿಂತ ಕಳಪೆ ಗುಣಮಟ್ಟದ ಎತ್ತುಗಳಿಗೆ ಬಹುಮಾನ ನೀಡಿದ್ದಾರೆಂದು ಆರೋಪ ಎಸಗಿದ್ದಾರೆ.
ಇದಲ್ಲದೆ ಆಯ್ಕೆ ಮಾಡಿರುವ ಪಟ್ಟಿಯಲ್ಲಿ ಬರೆದಿರುವ ಹೆಸರುಗಳನ್ನು ಅಳಿಸಿ ಮತ್ತೊಬ್ಬರ ಹೆಸರು ಬರೆದು ಬಹುಮಾನ ವಿತರಣೆ ಮಾಡಿದ್ದಾರೆ. ಇದೇ ಎತ್ತುಗಳಿಗೆ ಹೇಮಗಿರಿ ಜಾತ್ರೆಯಲ್ಲಿ ಪ್ರಥಮ ಬಹುಮಾನ ಬಂದಿದೆ. ಚುಂಚನಕಟ್ಟೆ ಜಾತ್ರೆಯಲ್ಲಿಯೂ ಉತ್ತಮ ಎತ್ತುಗಳೆಂದು ಪ್ರಶಂಸೆ ಪಡೆದಿವೆ. ಆದರೆ, ಬೇಬಿಬೆಟ್ಟದ ಜಾತ್ರೆಯಲ್ಲಿ ಬಹುಮಾನ ನೀಡದೆ ವಂಚಿಸಿದ್ದಾರೆಂದು ಕಿಡಿಕಾರಿದರು.
"ನನಗೆ ನ್ಯಾಯ ಸಿಗುವವರೆಗೂ ಪ್ರತಿಭಟನೆ ನಿಲ್ಲಿಸುವುದಿಲ್ಲ. ಶಾಸಕರು ಬಂದು ನನಗೆ ನ್ಯಾಯ ದೊರಕಿಸಿಕೊಡಬೇಕು. ಬಹುಮಾನ ನೀಡಿರುವ ಎತ್ತುಗಳನ್ನು ಇಲ್ಲಿಗೆ ಕರೆಸಿ ಮತ್ತೊಮ್ಮೆ ಪರೀಕ್ಷೆ ಮಾಡಲಿ. ಶಾಸಕರು ಯಾವುದೇ ರಾಜಕೀಯ ಮಾಡುವುದಿಲ್ಲ ಎಂದೇಳಿ ಬಹುಮಾನಕ್ಕೆ ಆಯ್ಕೆ ಮಾಡುವ ವಿಚಾರದಲ್ಲಿ ಅನ್ಯಾಯ ಮಾಡಿದ್ದಾರೆ" ಎಂದು ಆಕ್ರೋಶ ಹೊರಹಾಕಿದರು.