ಸಂಪಾದಕೀಯ | ಜನಾದೇಶದ ಸಂದೇಶ

election results
Published on

ಇದೇ ವರ್ಷದ ಏಪ್ರಿಲ್, ಮೇ ಹಾಗೂ ಜೂನ್​ನಲ್ಲಿ ನಡೆದ 18ನೇ ಲೋಕಸಭಾ ಚುನಾವಣೆಯ ಬಳಿಕ ರಾಜಕೀಯ ಸಮೀಕರಣಗಳು ಬದಲಾದವು. ಎನ್​ಡಿಎ ಮತ್ತೊಂದು ಅವಧಿಗೆ ಅಧಿಕಾರಕ್ಕೆ ಬಂದರೂ, ಕಾಂಗ್ರೆಸ್ ಪ್ರತಿಪಕ್ಷವಾಗಿ ತನ್ನ ಶಕ್ತಿ ವೃದ್ಧಿಸಿಕೊಂಡಿತು. ಹಾಗಾಗಿ, ಸ್ವಾಭಾವಿಕವಾಗಿಯೇ ‘ಕೈ’ ಪಾಳಯ ಆತ್ಮವಿಶ್ವಾಸದಿಂದ ಬೀಗುತ್ತಿತ್ತು. ಆದರೆ, ಲೋಕಸಭೆ ಚುನಾವಣೆಯ ನಂತರ ನಡೆದ ಜಮ್ಮು-ಕಾಶ್ಮೀರ ಮತ್ತು ಹರಿಯಾಣ ವಿಧಾನಸಭೆ ಚುನಾವಣೆಯು ಕೇಂದ್ರದ ಚುಕ್ಕಾಣಿ ಹಿಡಿದಿರುವ ಬಿಜೆಪಿಗೂ, ವಿರೋಧ ಪಕ್ಷವಾದ ಕಾಂಗ್ರೆಸ್​ಗೂ ಏಕಕಾಲಕ್ಕೆ ಪಾಠ ಕಲಿಸಿದೆ ಎಂಬುದು ಗಮನಾರ್ಹ (Mandate Message).

ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು 2019ರಲ್ಲಿ ಹಿಂಪಡೆದ ಬಳಿಕ ಇದೇ ಮೊದಲ ಬಾರಿಗೆ ಅಲ್ಲಿ ವಿಧಾನಸಭೆ ಚುನಾವಣೆ ನಡೆದಿದ್ದು, ಜಿದ್ದಾಜಿದ್ದಿನ ಸ್ಪರ್ಧೆ ಏರ್ಪಟ್ಟಿತ್ತು. ಕಾಶ್ಮೀರದಲ್ಲಿ ನ್ಯಾಷನಲ್ ಕಾನ್ಪರೆನ್ಸ್ ಮತ್ತು ಕಾಂಗ್ರೆಸ್ ಮೈತ್ರಿಕೂಟ ಸ್ಪಷ್ಟ ಬಹುಮತ ಪಡೆದುಕೊಂಡಿದೆ. ಬಿಜೆಪಿ ತನ್ನ ಸ್ಥಾನಗಳನ್ನು ಹೆಚ್ಚಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಆದರೆ, ಪೂರ್ಣರಾಜ್ಯದ ಸ್ಥಾನಮಾನ ಸೇರಿದಂತೆ ಹಲವು ಪ್ರಮುಖ ವಿಷಯಗಳು ಮುಂದಿನ ದಿನಗಳಲ್ಲಿ ಮುನ್ನೆಲೆಗೆ ಬರಲಿವೆ. ಕೇಂದ್ರ-ರಾಜ್ಯದ ಮಧ್ಯೆ ಸಂಘರ್ಷ ಏರ್ಪಡದೆ ಅಲ್ಲಿನ ಹೊಸ ಸರ್ಕಾರ ಜನರ ಆಶೋತ್ತರಗಳನ್ನು ಈಡೇರಿಸಲು, ಅಭಿವೃದ್ಧಿಯ ಆಶಯಗಳನ್ನು ನನಸಾಗಿಸಲು ಶ್ರಮಿಸಬೇಕು. ಕಳೆದ ಕೆಲ ವರ್ಷಗಳಿಂದ ಜಮ್ಮು-ಕಾಶ್ಮೀರದಲ್ಲಿ ಪ್ರತ್ಯೇಕತಾವಾದಿ ಚಟುವಟಿಕೆಗಳು ನಿಯಂತ್ರಣಕ್ಕೆ ಬಂದಿದ್ದು, ಅದು ಮತ್ತೆ ಚಿಗುರದಂತೆ ಎಚ್ಚರಿಕೆ ವಹಿಸಿ, ಶಾಂತಿಸ್ಥಾಪನೆಗೆ ಆದ್ಯತೆ ನೀಡಬೇಕು.

ಪುಟ್ಟ ರಾಜ್ಯ ಹರಿಯಾಣದಲ್ಲಿ ಬಿಜೆಪಿ ದಾಖಲೆ ನಿರ್ವಿುಸಿದೆ. ಏಕೆಂದರೆ, ಸತತವಾಗಿ 10 ವರ್ಷಗಳ ಆಡಳಿತದ ಬಳಿಕ ಇಲ್ಲಿಯ ಜನರು ಒಂದೇ ಪಕ್ಷಕ್ಕೆ ಮತ್ತೊಂದು ಅವಧಿಯನ್ನು ನೀಡಿದ ನಿದರ್ಶನ ಇರಲಿಲ್ಲ. ಆದರೆ, ಪ್ರಸಕ್ತ ಚುನಾವಣೆಯಲ್ಲಿ ಸ್ಪಷ್ಟ ಬಹುಮತ ಪಡೆಯುವ ಮೂಲಕ ಬಿಜೆಪಿ ಸತತವಾಗಿ ಮೂರನೇ ಬಾರಿ ಅಧಿಕಾರಕ್ಕೆ ಬಂದಿದೆ. ‘ಹರಿಯಾಣದಲ್ಲಿ ಗೆದ್ದೇ ಗೆಲ್ಲುತ್ತೇವೆ’ ಎಂಬ ಕಾಂಗ್ರೆಸ್​ನ ಅತಿಯಾದ ಆತ್ಮವಿಶ್ವಾಸವೇ ಆ ಪಕ್ಷಕ್ಕೆ ಮುಳುವಾದಂತಿದೆ. ಚುನಾವಣೆ ಗೆಲ್ಲುವ ಮುನ್ನವೇ ಮುಖ್ಯಮಂತ್ರಿ ಸ್ಥಾನಕ್ಕಾಗಿ ನಡೆದ ತೀವ್ರ ಸ್ಪರ್ಧೆ, ಪಕ್ಷದೊಳಗಿನ ಆಂತರಿಕ ಭಿನ್ನಾಭಿಪ್ರಾಯಗಳಿಗೆ ಕಾಂಗ್ರೆಸ್ ಭಾರಿ ಬೆಲೆ ತೆರುವಂತಾಗಿದೆ. ಅಲ್ಲದೆ, ಹರಿಯಾಣದಲ್ಲಿ ಪಕ್ಷದ ಬೇರುಗಳನ್ನು ವಿಸ್ತರಿಸುವ ಆಮ್ ಆದ್ಮಿ ಪಕ್ಷದ ನಾಯಕರ ಪ್ರಯತ್ನ ವಿಫಲಗೊಂಡಿದೆ.

ಎರಡೂ ರಾಜ್ಯಗಳ ವಿಷಯದಲ್ಲಿ ಮತದಾನೋತ್ತರ ಸಮೀಕ್ಷೆಗಳು ಸುಳ್ಳಾಗಿವೆ. ಹರಿಯಾಣದಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತ ಪಡೆದು ಸರ್ಕಾರ ರಚಿಸಲಿದೆ ಹಾಗೂ ಜಮ್ಮು-ಕಾಶ್ಮೀರದಲ್ಲಿ ಅತಂತ್ರ ವಿಧಾನಸಭೆ ಏರ್ಪಡಲಿದೆ ಎಂದು ಈ ಸಮೀಕ್ಷೆಗಳು ಭವಿಷ್ಯ ನುಡಿದಿದ್ದವು. ಆದರೆ, ಮತದಾರ ಮತ್ತೊಮ್ಮೆ ಅಚ್ಚರಿಯ ತೀರ್ಪು ನೀಡಿದ್ದು, ಎಲ್ಲ ರಾಜಕೀಯ ಪಕ್ಷಗಳಿಗೂ ಸಂದೇಶ ರವಾನಿಸಿದ್ದಾನೆ. ಮುಂಬರುವ ದಿನಗಳಲ್ಲಿ ಮಹಾರಾಷ್ಟ್ರ, ಜಾರ್ಖಂಡ್ ಹಾಗೂ ದೆಹಲಿಯಲ್ಲಿ ವಿಧಾನಸಭೆ ಚುನಾವಣೆ ನಡೆಯಲಿವೆ. ಹೀಗಾಗಿ ಎಲ್ಲ ಪ್ರಮುಖ ಪಕ್ಷಗಳು ಮತ್ತೆ ಸಿದ್ಧತೆಯಲ್ಲಿ ತೊಡಗುವ, ಕಾರ್ಯತಂತ್ರ ರೂಪಿಸುವ ಅನಿವಾರ್ಯತೆ ಇದೆ. ಕಾಂಗ್ರೆಸ್ ಮಿತ್ರಪಕ್ಷಗಳನ್ನು ಹೆಚ್ಚು ಅವಲಂಬಿಸಬೇಕಾಗುತ್ತದೆ ಎಂಬುದನ್ನು ಈ ಫಲಿತಾಂಶ ಸಾರಿದೆ. ಬಿಜೆಪಿ ಕೂಡ ಅತಿಯಾದ ಆತ್ಮವಿಶ್ವಾಸ ಹೊಂದುವಂತಿಲ್ಲ. ಪ್ರಾದೇಶಿಕ ಪಕ್ಷಗಳು ಎಚ್ಚರಿಕೆಯ ಹೆಜ್ಜೆ ಇಡಬೇಕಿದೆ. ಅದೇನಿದ್ದರೂ, ಜನರ ತೀರ್ವನವನ್ನು ರಾಜಕೀಯ ಪಕ್ಷಗಳು ಗೌರವಿಸಬೇಕು, ವಿನಯದಿಂದ ಒಪ್ಪಿಕೊಂಡು ಅಭಿವೃದ್ಧಿಯ ಹಾದಿಯಲ್ಲಿ ಒಟ್ಟಾಗಿ ಪಯಣಿಸಲು ಸಹಕರಿಸಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net