

ಬಂಟ್ವಾಳ: ಮನೆಯಲ್ಲಿ ಜನರನ್ನು ಸೇರಿಸಿ ವಾಮಾಚಾರ ನಡೆಸುತ್ತಿರುವ ಬಗ್ಗೆ ಪ್ರಶ್ನಿಸಲು ಹೋದವರ ಮೇಲೆಯೇ ಹಲ್ಲೆ ಮಾಡಿದ ಘಟನೆ ಬಂಟ್ವಾಳ ತಾಲೂಕಿನ ಕುಕ್ಕಿಪಾಡಿ ಗ್ರಾಮದ ಅಬ್ಯಂತ ಎಂಬಲ್ಲಿ ಭಾನುವಾರ ನಡೆದಿದೆ.
ಇಲ್ಲಿನ ವಿಶ್ವನಾಥ ಆಚಾರ್ಯ ಎಂಬಾತನ ಮನೆಯಲ್ಲಿ ಲಾಕ್‌ಡೌನ್ ನಿಯಮ ಮೀರಿ ಬೇರೆ ಊರಿನ ಜನ ಜಮಾಯಿಸಿದ್ದರು. ಅಲ್ಲಿ ವಾಮಾಚಾರ ನಡೆಸಲಾಗುತ್ತಿತ್ತು ಎಂದು ಆರೋಪಿಸಲಾಗಿದೆ.
ಸ್ಥಳೀಯ ಆಶಾ ಕಾರ್ಯಕರ್ತೆ ಪುಷ್ಪಲತಾ ಅವರು ಈ ವಿಷಯವನ್ನು ಕುಕ್ಕಿಪಾಡಿ ಗ್ರಾಮ ಟಾಸ್ಕ್‌ಫೋರ್ಸ್ ಸಮಿತಿ ಅಧ್ಯಕ್ಷ, ಗ್ರಾಪಂ ಸದಸ್ಯ ಯೋಗೀಶ್ ಆಚಾರ್ಯ ಅವರ ಗಮನಕ್ಕೆ ತಂದಿದ್ದರು.
ವಿಚಾರಿಸಲು ವಿಶ್ವನಾಥ ಅವರ ಮನೆಗೆ ತೆರಳಿದಾಗ ಮನೆಯ ಮಂದಿಯೆಲ್ಲ ಸೇರಿ ಇವರನ್ನು ಏರು ಧ್ವನಿಯಲ್ಲಿ ಗದರಿಸತೊಡಗಿದರು. ವಿಶ್ವನಾಥನ ಪತ್ನಿ ಪೊರಕೆ ಹಿಡಿದು ಹೊಡೆಯಲು ಮುಂದಾಗಿದ್ದರು ಎನ್ನಲಾಗಿದೆ. ಅಲ್ಲಿಗೆ ಬಂದಿದ್ದ ಪರ ಊರವರು ಪರಿಸ್ಥಿತಿಯನ್ನು ಗಮನಿಸಿ ಓಡಿ ಹೋಗಿದ್ದಾರೆ.
ಘಟನೆ ಬಗ್ಗೆ ಯೋಗೀಶ್ ಪುಂಜಾಲಕಟ್ಟೆ ಪೊಲೀಸ್ ಠಾಣೆಗೆ ಮಾಹಿತಿ ನೀಡಿದರು. ಪೊಲೀಸರು ಆಗಮಿಸಿ ವಿಶ್ವನಾಥರನ್ನು ವಶಕ್ಕೆ ಪಡೆದುಕೊಂಡರು. ಆಶಾ ಕಾರ್ಯಕರ್ತೆಯ ಕರ್ತವ್ಯಕ್ಕೆ ಅಡ್ಡಿಪಡಿಸಲಾಗಿರುವ ಬಗ್ಗೆ ಪುಂಜಾಲಕಟ್ಟೆ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.