ಇದಕ್ಕೆಲ್ಲ ಕಿವಿಗೊಡಬೇಡಿ, ಬಿಟ್ಟುಬಿಡಿ! ವಿಶಾಲ್ ಆರೋಗ್ಯ ಸ್ಥಿತಿ ಬಗ್ಗೆ ಮ್ಯಾನೇಜರ್​ ಸ್ಪಷ್ಟನೆ, ಹಂಚಿಕೊಂಡ ಮಾಹಿತಿ ಇದು | Vishal Health

Actor Vishal
Published on

Vishal Health: ಇತ್ತೀಚೆಗಷ್ಟೇ ಚೆನ್ನೈನಲ್ಲಿ ನಡೆದ 'ಮದಗಜರಾಜ' ಚಿತ್ರದ ಪತ್ರಿಕಾಗೋಷ್ಠಿಯಲ್ಲಿ ಕಾಣಿಸಿಕೊಂಡ ತಮಿಳು ನಟ ವಿಶಾಲ್​ರನ್ನು ಕಂಡು ಪ್ರತಿಯೊಬ್ಬರು ಆಶ್ಚರ್ಯಚಕಿತರಾದರು. ವೇದಿಕೆಯಲ್ಲಿ ಮೈಕ್ ಹಿಡಿದು ನಿಂತ ನಟನ ಕೈ ನಡುಕ, ದೇಹದಲ್ಲಿ ಉಂಟಾದ ನಡುಕ ನೋಡಿ ಅವರು ಯಾವುದೋ ದೀರ್ಘ ಕಾಯಿಲೆಯಿಂದ ಬಳಲುತ್ತಿದ್ದಾರೆ ಎಂಬ ಶಂಕೆಗಳು ಜಾಲತಾಣಗಳಲ್ಲಿ ವ್ಯಾಪಕವಾಗಿ ವ್ಯಕ್ತವಾಯಿತು.

ಇದರ ಬೆನ್ನಲ್ಲೇ ನಟನಿಗೆ ಸಂಬಂಧಿಸಿದ ವಿಡಿಯೋಗಳು ಜಾಲತಾಣಗಳಲ್ಲಿ ಭಾರೀ ಸದ್ದು ಮಾಡಿತ್ತು. ಕೆಲವರು ವಿಶಾಲ್ ಹೇಳಿಕೊಳ್ಳಲಾಗದ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದರೆ, ಇನ್ನೂ ಕೆಲವರು ಬಹುಶಃ ಅವರು ತಮ್ಮ ದೀರ್ಘಕಾಲದ ತೊಂದರೆಯನ್ನು ಮರೆಮಾಚಿದ್ದಾರೆ ಎಂಬ ಊಹಾಪೋಹಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಬ್ಬಿಸಿದರು. ಸದ್ಯ ಇದು ನಟನ ಅಭಿಮಾನಿಗಳಲ್ಲಿ ಹಾಗೂ ಅವರ ಪ್ರೀತಿ ಪಾತ್ರರನ್ನು ತೀವ್ರ ಬೇಸರಕ್ಕೆ ದೂಡಿದೆ.

ವದಂತಿಗಳ ತಳ್ಳಿ

12 ವರ್ಷಗಳ ಹಿಂದೆ ವಿಶಾಲ್ ಅಭಿನಯದ ‘ಮದಗಜರಾಜ’ ಚಿತ್ರವು ಈಗ ತೆರೆಗೆ ಬರಲು ಸಿದ್ಧವಾಗಿದೆ. ಈ ಸಂದರ್ಭದಲ್ಲಿ ಚಿತ್ರಕ್ಕೆ ಸಂಬಂಧಿಸಿದಂತೆ ಒಂದಷ್ಟು ವಿಚಾರಗಳನ್ನು ಹಂಚಿಕೊಳ್ಳಲು ಮೈಕ್​ ಹಿಡಿದ ವಿಶಾಲ್​ಗೆ ಕೈ ನಡುಕ ಉಂಟಾಯಿತು. ಕೈನಡುಗುವುದರ ಜತೆಗೆ ಮಾತುಗಳು ತೊದಲುತ್ತಿತ್ತು. ಈ ವಿಡಿಯೋಗಳು ಜಾಲತಾಣಗಳಲ್ಲಿ ಹರಿದಾಡಿದ್ದೇ ತಡ ಇದೀಗ ಹಲವು ವದಂತಿಗಳಿಗೆ ಕಾರಣವಾಗಿದೆ. ಈಗಾಗಲೇ ವಿಶಾಲ್ ಆರೋಗ್ಯಕ್ಕೆ ಸಂಬಂಧಿಸಿದಂತೆ ಅಪೋಲೋ ಆಸ್ಪತ್ರೆ ವೈದ್ಯರು ಸ್ಪಷ್ಟನೆ ನೀಡಿದ್ದು, ನಟ ವೈರಲ್ ಜ್ವರದಿಂದ ಬಳಲುತ್ತಿದ್ದಾರೆ. ಅವರಿಗೆ ದೀರ್ಘ ವಿಶ್ರಾಂತಿಯ ಅಗತ್ಯವಿದೆ ಎಂದಿದ್ದಾರೆ. ಇಷ್ಟಾದರೂ ಸಹ ಊಹಾಪೋಹಗಳು ಮಾತ್ರ ಸದ್ದು ಮಾಡುತ್ತಲೇ ಇವೆ.

ಮ್ಯಾನೇಜರ್​ ಸ್ಪಷ್ಟನೆ

ಸದ್ಯ ವಿಶಾಲ್ ವಿಶ್ರಾಂತಿಯಲ್ಲಿದ್ದು, ಅವರ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಹರಿಸಿದ್ದಾರೆ. ಆದ್ರೆ, ಹರಿದಾಡುತ್ತಿರುವ ವದಂತಿಗಳಿಂದ ಬೇಸತ್ತ ವಿಶಾಲ್​ ಅವರ ಮ್ಯಾನೇಜರ್ ಹರಿ ಕೃಷ್ಣನ್​, "ಒಂದಷ್ಟು ಊಹಾಪೋಹಗಳು ಅವರ ಆರೋಗ್ಯದ ಬಗ್ಗೆ ತಪ್ಪು ಮಾಹಿತಿಯನ್ನು ಹರಡುತ್ತಿವೆ, ಅದನ್ನೆಲ್ಲ ನಂಬಬೇಡಿ. ವೈರಲ್ ಜ್ವರದಿಂದಾಗಿ ವಿಶಾಲ್ ಅವರಿಗೆ ದೈಹಿಕ ತೊಂದರೆಗಳು ಕಾಣಿಸಿಕೊಂಡಿವೆ ಮತ್ತು ಆಯಾಸ ಉಂಟಾಗಿದೆ ಅಷ್ಟೇ. ಮನೆಯಲ್ಲಿ ವಿಶ್ರಾಂತಿ ಪಡೆಯಲು ವೈದ್ಯರ ಸಲಹೆ ಫಾಲೋ ಮಾಡುತ್ತಿದ್ದಾರೆ. ವಿಶಾಲ್​ರನ್ನು ಸುತ್ತುವರೆದಿರುವ ಇಂತಹ ವದಂತಿಗಳನ್ನು ನಂಬಬೇಡಿ" ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net