ಮಣಬೂರಿಗೆ ಬೇಕು ಮತಗಟ್ಟೆ

dc office CKM
ಡಿಸಿ ಕಚೇರಿ
Published on

ಬಾಳೆಹೊನ್ನೂರು: ಖಾಂಡ್ಯ ಹೋಬಳಿ ಮಣಬೂರು ಗ್ರಾಮದಲ್ಲಿ ಮತಗಟ್ಟೆ ತೆರೆಯುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿಗೆ ಗ್ರಾಮಸ್ಥರು ಪತ್ರ ಬರೆದಿದ್ದಾರೆ.

ಗ್ರಾಮದಲ್ಲಿ ಸುಮಾರು 60ಕ್ಕೂ ಹೆಚ್ಚು ಕುಟುಂಬಗಳು ವಾಸ ಮಾಡುತ್ತಿದ್ದು, 600ಕ್ಕೂ ಅಧಿಕ ಜನಸಂಖ್ಯೆ ಇದೆ. ಗ್ರಾಮದಲ್ಲಿ 300ಕ್ಕೂ ಹೆಚ್ಚು ಮತದಾರರಿದ್ದಾರೆ. ಚುನಾವಣೆ ಸಂದರ್ಭ ಮಣಬೂರಿನಿಂದ 7 ಕಿ.ಮೀ ದೂರದ ಬಿಕ್ಕರಣೆ ಗ್ರಾಮಕ್ಕೆ ತೆರಳಿ ಮತ ಚಲಾಯಿಸಬೇಕು. ಮಹಿಳೆಯರು, ವೃದ್ಧರು, ಕಾಡು ದಾರಿಯಲ್ಲಿ 7 ಕಿ.ಮೀ ದೂರ ನಡೆದುಕೊಂಡು ಹೋಗುವುದು ಕಷ್ಟ. ಚುನಾವಣೆ ಸಂದರ್ಭದಲ್ಲಿ ಕೆಲವು ರಾಜಕೀಯ ಪಕ್ಷದವರು ಇದೇ ಅವಕಾಶ ಬಳಸಿಕೊಂಡು ತಮ್ಮ ವಾಹನಗಳಲ್ಲಿ ಮತದಾರರನ್ನು ಕರೆದುಕೊಂಡು ಹೋಗಿ ತಮ್ಮ ಪಕ್ಷದ ಅಭ್ಯರ್ಥಿಗಳಿಗೆ ಮತ ಹಾಕಿಸಿಕೊಳ್ಳುತ್ತಾರೆ ಎಂದು ಗ್ರಾಮಸ್ಥರು ಪತ್ರದಲ್ಲಿ ದೂರಿದ್ದಾರೆ.
ಮಣಬೂರು ಗ್ರಾಮದಲ್ಲಿಯೇ ಮತಗಟ್ಟೆ ತೆರೆದು ಗ್ರಾಮಸ್ಥರಿಗೆ ಮುಕ್ತ ಮತ್ತು ಕಡ್ಡಾಯ ಮತದಾನಕ್ಕೆ ಅನುಕೂಲ ಮಾಡಿಕೊಡಬೇಕು. ಮಣಬೂರಿನಲಿ ಮತಗಟ್ಟೆ ತೆರೆಯದಿದ್ದಲ್ಲಿ ಮುಂಬರುವ ಜಿಲ್ಲಾ ಪಂಚಾಯಿತಿ, ಲೋಕಸಭಾ ಚುನಾವಣೆಯನ್ನು ಬಹಿಷ್ಕರಿಸುವುದಾಗಿ ಗ್ರಾಮಸ್ಥರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net