ಸಿನಿಮೀಯ ಘಟನೆ; ಅಮೆರಿಕದಲ್ಲಿದ್ದುಕೊಂಡೇ ತಮಿಳುನಾಡಿನಲ್ಲಿ ತನ್ನ ಹೆಂಡತಿಯನ್ನು ಕೊಲೆ ಮಾಡಿಸಿದ ಟೆಕ್ಕಿ!

Murder_571_855
Published on

ಚೆನೈ; ಇದೊಂದು ಸಿನಿಮೀಯ ಘಟನೆ; ಟೆಕ್ಕಿಯೊಬ್ಬ ಅಮೆರಿಕದಲ್ಲಿದ್ದುಕೊಂಡೆ ತಮಿಳನಾಡಿನಲ್ಲಿದ್ದ ತನ್ನ ಹೆಂಡತಿಯನ್ನು ಉಪಾಯದಿಂದ ಕೊಲ್ಲಿಸಿರುವ ಘಟನೆ ಯಾವ ಸಿನಿಮಾ ಸ್ಟೋರಿಗೂ ಕಡಿಮೆ ಇಲ್ಲ.

ಮೇ 21 ರಂದು ತರುವರೂರು ನಗರದ ಕಿದರಕೊಂಡಂ ಬ್ರಿಜ್ ಬಳಿ 28 ವರ್ಷದ ಜಯಭಾರತಿ ಎನ್ನುವ ಮಹಿಳೆ ಅಪಘಾತದಲ್ಲಿ ಮೃತಪಟ್ಟಿರುತ್ತಾಳೆ. ಟಾಟಾ ಏಸ್ ವಾಹನವೊಂದು ಜಯಭಾರತಿ ಸವಾರಿ ಮಾಡುತ್ತಿದ್ದ ಸ್ಕೂಟರ್ ಗೆ ಡಿಕ್ಕಿ ಹೊಡೆದಿತ್ತು. ಸ್ಥಳೀಯರು ಅವಳನ್ನು ಆಸ್ಪತ್ರೆಗೆ ಸೇರಿಸಿದ್ದರೂ ಬದುಕುಳಿದಿರಲಿಲ್ಲ.

ಇದು ಅಪಘಾತ ಅಲ್ಲ ಕೊಲೆ ಎಂದು ಜಯಭಾರತಿ ಕುಟುಂಬದವರು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ತನಿಖೆ ನಡೆಸಿದಾಗ ಗೊತ್ತಾಗಿದ್ದು, ಜಯಭಾರತಿ 2015 ರಲ್ಲಿ ವಿಷ್ಣುಪ್ರಕಾಶ್ ಎನ್ನುವರನ್ನು ಮದುವೆಯಾಗಿದ್ದರು. ವಿಷ್ಣುಪ್ರಕಾಶ್ ಅಮೆರಿಕದಲ್ಲಿ ಐಟಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಕೌಟುಂಬಿಕ ಕಲಹದಿಂದ ಜಯಭಾರತಿ ವಿಷ್ಣುಪ್ರಕಾಶ್ ನನ್ನು ತೊರೆದು ಅಂತಾಕುಡಿ ಪೋಸ್ಟ್ ಆಫೀಸ್ ನಲ್ಲಿ ಕೆಲಸ ಮಾಡುತ್ತಿದ್ದಳು.

ಕಡೆಗೆ ವಿಷ್ಣುಪ್ರಕಾಶ್ ಜೊತೆ ಬಾಳಲು ಇಷ್ಟ ಇಲ್ಲವೆಂದು ಹೇಳಿ ಜಯಭಾರತಿ ವಿವಾಹ ವಿಚ್ಛೇದನಕ್ಕೆ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದಳು. ಅಲ್ಲದೇ ತನಗೆ ವಿಷ್ಣುಪ್ರಕಾಶ್ ನಿಂದ ಪರಿಹಾರ ಬರಬೇಕು ಎಂದು ಕೇಳಿಕೊಂಡಿದ್ದಳು.

ಇದರಿಂದ ರೊಚ್ಚಿಗೆದ್ದ ವಿಷ್ಣುಪ್ರಕಾಶ್ ಅಮೆರಿಕದಲ್ಲಿಯೇ ಕುಳಿತು ಜಯಭಾರತಿ ಮರ್ಡರ್ ಗೆ ಯೋಜನೆ ರೂಪಿಸುತ್ತಾನೆ. ಆ ಪ್ರಕಾರ ತನ್ನ ತಂಗಿ ಗಂಡ ಸೇಂತಿಲ್ ಕುಮಾರ್ ಮೂಲಕ ಕೊಲೆ ಮಾಡಿಸುತ್ತಾನೆ. ಪೊಲೀಸರು ಸಿಸಿಟಿವಿ ಹಾಗೂ ಸಾಂದರ್ಭಿಕ ಸಾಕ್ಷ್ಯಗಳನ್ನು ಪರಿಶೀಲಿಸಿದಾಗ, ಸೇಂಥಿಲ್ ಕುಮಾರ್ ಜಗನ್, ರಾಜಾ ಮತ್ತು ಪ್ರಸನ್ನ ಎನ್ನುವರ ಸಹಕಾರದೊಡನೆ ಅಪಘಾತ ಎಂಬಂತೆ ಬಿಂಬಿಸಿ ಜಯಭಾರತಿಯನ್ನು ಕೊಲೆ ಮಾಡಿರುತ್ತಾರೆ.

ಸದ್ಯ ಪೊಲೀಸರು ನಾಲ್ವರನ್ನ ಬಂಧಿಸಿದ್ದು ಪ್ರಮುಖ ಆರೋಪಿ ವಿಷ್ಣುಪ್ರಕಾಶ್ ನನ್ನು ಅಮೆರಿಕದಿಂದ ಭಾರತಕ್ಕೆ ಕರೆತರಲು ತಮಿಳುನಾಡು ಪೊಲೀಸರು ರಾಯಭಾರ ಕಚೇರಿ ಮೊರೆ ಹೋಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net