ಒಂಬತ್ತು ತಿಂಗಳವರೆಗೂ ಸೋಂಕಿತರ ಸೇವೆ; ಹೆರಿಗೆಯಾಗಿ ಕೆಲವೇ ದಿನಕ್ಕೆ ಪ್ರಾಣಬಿಟ್ಟ ನರ್ಸ್​!

nurse
Published on

ರಾಯ್​ಪುರ: ಕರೊನಾ ಸೋಂಕಿನ ಅಬ್ಬರ ಇನ್ನೂ ಕಡಿಮೆಯಾಗಿಲ್ಲ. ಈಗಾಗಲೇ ಅದೆಷ್ಟೋ ವೈದ್ಯಕೀಯ ಸಿಬ್ಬಂದಿ ಸೋಂಕಿಗೆ ಪ್ರಾಣ ಬಿಟ್ಟಿದ್ದಾರೆ. ಅದೇ ರೀತಿ ತುಂಬು ಗರ್ಭಿಣಿ ಎನ್ನುವುದನ್ನೂ ಲೆಕ್ಕಿಸದೆ ಸೋಂಕಿತರ ಸೇವೆಗೆ ದುಡಿದಿದ್ದ ನರ್ಸ್​ ಒಬ್ಬರು ಮಗಳಿಗೆ ಜನ್ಮ ಕೊಟ್ಟು ಪ್ರಾಣ ಬಿಟ್ಟಿರುವ ಘಟನೆ ಚತ್ತೀಸ್​ಗಢದಲ್ಲಿ ನಡೆದಿದೆ.

ಚತ್ತೀಸ್​ಗಢದ ಕಬೀರ್‌ಹ್ಯಾಮ್ ಜಿಲ್ಲೆ ಪ್ರಭಾ (30) ಮೃತ ದುರ್ದೈವಿ. ಆಕೆ ಮೊರ್ಮಲಿ ಜಿಲ್ಲೆಯ ಖೈರ್ವಾರ್ ಖುರ್ದ್ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನರ್ಸ್​ ಆಗಿ ಕೆಲಸ ಮಾಡುತ್ತಿದ್ದಳು. ಕರೊನಾ ಬಂದಾಗಿನಿಂದ ಕರೊನಾ ವಾರ್ಡ್​ನಲ್ಲೇ ಆಕೆ ಕೆಲಸದಲ್ಲಿ ತೊಡಗಿಕೊಂಡಿದ್ದಳು. ಈ ಮಧ್ಯೆ ಆಕೆ ಗರ್ಭಿಣಿಯಾಗಿದ್ದು, ಒಂಬತ್ತು ತಿಂಗಳು ತುಂಬುವವರೆಗೂ ಆಸ್ಪತ್ರೆಯಲ್ಲಿ ಸೋಂಕಿತರ ಸೇವೆ ಮಾಡಿದ್ದಾಳೆ. ಮನೆಯಿಂದ ಆಸ್ಪತ್ರೆ ಸಾಕಷ್ಟು ದೂರವಿದ್ದ ಹಿನ್ನೆಲೆಯಲ್ಲಿ ಆಸ್ಪತ್ರೆಯ ಹತ್ತಿರದಲ್ಲೇ ಬಾಡಿಗೆ ಮನೆ ಮಾಡಿಕೊಂಡು ಒಬ್ಬಳೇ ಎಲ್ಲವನ್ನೂ ನಿಭಾಯಿಸಿದ್ದಾಳೆ.

ಪ್ರಭಾಳಿಗೆ ಏಪ್ರಿಲ್​ 30ರಂದು ಹೆರಿಗೆ ನೋವು ಕಾಣಿಸಿಕೊಂಡಿದ್ದು, ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮುದ್ದಾದ ಹೆಣ್ಣು ಮಗುವಿಗೆ ಆಕೆ ಜನ್ಮ ನೀಡಿದ್ದಳು. ಆದರೆ ಈ ಮಧ್ಯೆ ಆಕೆಗೆ ಜ್ವರ ಕಾಣಿಸಿಕೊಳ್ಳಲಾರಂಭಿಸಿದೆ. ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆಗಿ ಮನೆಗೆ ತೆರಳಿದ ಮೇಲೆ ಜ್ವರ ಕೆಮ್ಮು ಹೆಚ್ಚಾದ ಕಾರಣ ಆಕೆಯನ್ನು ಮತ್ತೊಮ್ಮೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಬರುಬರುತ್ತಾ ಆಕೆಯ ಸ್ಥಿತಿ ಗಂಭೀರವಾಗತೊಡಗಿದೆ. ಆಕ್ಸಿಜನ್​ ಲೆವೆಲ್​ ಕೂಡ ಕಡಿಮೆಯಾಗಿದ್ದು, ಮೇ 21ರಂದು ಪ್ರಭಾ ಕೊನೆಯುಸಿರೆಳೆದಿದ್ದಾಳೆ. ಹೆಂಡತಿಯನ್ನು ಕಳೆದುಕೊಂಡಿರುವ ಗಂಡ ನೋವಿನಿಂದ ಎಲ್ಲ ವಿಚಾರವನ್ನು ಹಂಚಿಕೊಂಡಿದ್ದಾನೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net