ಚುನಾವಣೆಯಲ್ಲಿ ಪಂಕಜಾ ಸೋತರೆ ನನ್ನ ಸಾವು ಖಚಿತ ಎಂದಿದ್ದ ವ್ಯಕ್ತಿ ಇಂದು ಅಪಘಾತದಲ್ಲಿ ಮೃತ! ಅಯ್ಯೋ ದುರ್ವಿಧಿಯೇ

Untitled design (82)
Published on

ಮಹಾರಾಷ್ಟ್ರ: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನಾಯಕಿ ಪಂಕಜಾ ಮುಂಡೆ ಸೋತರೆ, ನಾನು ಸಾವಿಗೆ ಶರಣಾಗುವೆ ಎಂದಿದ್ದ ವ್ಯಕ್ತಿಯೊಬ್ಬ ಇಂದು ಬಸ್​ ಅಪಘಾತದಲ್ಲಿ ಮೃತಪಟ್ಟಿದ್ದು, ಸಾರ್ವಜನಿಕರಲ್ಲಿ ಭಾರೀ ಆಶ್ಚರ್ಯ ಉಂಟುಮಾಡಿದೆ. ಹುಚ್ಚುತನದಲ್ಲಿ ನೀಡಿದ್ದ ಹೇಳಿಕೆ ಇಂದು ನಿಜವೇ ಆಗಿ ಹೋಯಿತೇ ಎಂದು ಅನೇಕರು ಸಾಮಾಜಿಕ ಜಾಲತಾಣದಲ್ಲಿ ಅಭಿಪ್ರಾಯಿಸಿದ್ದಾರೆ.

ಮಹಾರಾಷ್ಟ್ರದ ಬೀಡ್ ಜಿಲ್ಲೆಯಿಂದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ನಾಯಕಿ ಪಂಕಜಾ ಮುಂಡೆ ಅವರು ಸೋತರೆ, ನಾನು ಜೀವಂತವಾಗಿ ಉಳಿಯುವುದಿಲ್ಲ ಎಂದು ವಿಡಿಯೋ ಮಾಡಿದ್ದ 38 ವರ್ಷದ ವ್ಯಕ್ತಿಯೊಬ್ಬರು ಬಸ್‌ನಡಿ ಸಿಲುಕಿ ಸಾವನ್ನಪ್ಪಿರುವ ಘಟನೆ ಅಹ್ಮದ್‌ಪುರ-ಅಂಧೋರಿ ರಸ್ತೆಯಲ್ಲಿ ಬೋರ್ಗಾಂವ್ ಪಾಟಿ ಬಳಿ ರಾತ್ರಿ 9 ಗಂಟೆ ಸುಮಾರಿಗೆ ಸಂಭವಿಸಿದೆ ಎಂದು ವರದಿಯಾಗಿದೆ.

ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಪಂಕಜಾ ಮುಂಡೆ, ಬೀಡ್ ಕ್ಷೇತ್ರದಲ್ಲಿ ಕಾಂಗ್ರೆಸ್ ನಾಯಕ ಬಜರಂಗ್ ಸೋನಾವಾನೆ ವಿರುದ್ಧ 6,553 ಮತಗಳಿಂದ ಸೋತರು. ಪಂಕಜಾ ಅವರ ಸೋಲಿನಿಂದ ಕಂಗೆಟ್ಟಿದ್ದ ವ್ಯಕ್ತಿ, ಕೆಲವು ದಿನಗಳಿಂದ ಖಿನ್ನತೆಗೆ ಒಳಗಾಗಿದ್ದರು ಮತ್ತು ಮೌನಕ್ಕೆ ಶರಣಾಗಿದ್ದರು ಎಂದು ಆತನ ಕುಟುಂಬದವರು ತಿಳಿಸಿದ್ದಾರೆ.

ಅಪಘಾತದಲ್ಲಿ ಸಾವನ್ನಪ್ಪಿದ ವ್ಯಕ್ತಿಯನ್ನು ಸಚಿನ್ ಕೊಂಡಿಬಾ ಮುಂಡೆ ಎಂದು ಗುರುತಿಸಲಾಗಿದ್ದು, ಲಾತೂರ್‌ನ ಅಹ್ಮದ್‌ಪುರದ ಯೆಸ್ಟರ್‌ನಲ್ಲಿ ಲಾರಿ ಚಾಲಕನಾಗಿ ಕೆಲಸ ಮಾಡುತ್ತಿದ್ದರು ಎಂದು ಹೇಳಲಾಗಿದೆ. ಲೋಕಸಭಾ ಚುನಾವಣೆ ಫಲಿತಾಂಶಕ್ಕೂ ಮುನ್ನವೇ ಬೆದರಿಕೆ ವಿಡಿಯೋವನ್ನು ಬಿಡುಗಡೆ ಮಾಡಿದ್ದ ಸಚಿನ್​, ಇದೀಗ ಬಸ್​ ಚಕ್ರಕ್ಕೆ ಸಿಲುಕಿ ಮೃತಪಟ್ಟಿರುವುದು ಭಾರೀ ಅನುಮಾನಕ್ಕೆ ಕಾರಣವಾಗಿದೆ. ಇದು ನಿಜಕ್ಕೂ ಆತ್ಮಹತ್ಯೆಯೇ? ಅಥವಾ ಅಪಘಾತದಿಂದ ಸಾವನ್ನಪ್ಪಿರುವುದೇ ಎಂಬುದು ಪೊಲೀಸರ ತನಿಖೆಯಿಂದ ಸ್ಪಷ್ಟವಾಗಬೇಕಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net