ಎಂಐ 10ಟಿ ಪ್ರೋ ಫೋನ್​ ಇಲ್ಲದೆ ಮದುವೆಯಾಗುವುದಿಲ್ಲ ಎಂದ ಯುವಕ! ಯುವಕನ ಆಸೆಯನ್ನು ಈಡೇರಿಸಿದ ಶಾವೊಮಿ ಸಂಸ್ಥೆ!

ಮಿ
Published on

ಬೆಂಗಳೂರು: ಮಕ್ಕಳು ಏನಾದರೂ ಬೆಲೆ ಬಾಳುವ ವಸ್ತು ಬೇಕಿದ್ದರೆ, ಮನೆಯಲ್ಲಿ ಸುಮ್ಮನೆ ಹಟ ಮಾಡುತ್ತಾರೆ. ನನಗೆ ಅದನ್ನು ಕೊಡಿಸದೆಯೇ ನಾನು ಊಟ ಮಾಡುವುದಿಲ್ಲ ಎಂದು ಪಟ್ಟು ಹಿಡಿಯುತ್ತಾರೆ. ಬರೀ ಮಕ್ಕಳು ಮಾತ್ರವಲ್ಲ, ಮದುವೆಯ ವಯಸ್ಸಿನ ಹುಡುಗನೂ ಇದೇ ರೀತಿ ಹಟ ಹಿಡಿದು ಕುಳಿತು ಶಾವೊಮಿ ಸಂಸ್ಥೆಯಿಂದ 40 ಸಾವಿರ ರೂಪಾಯಿ ಬೆಲೆ ಬಾಳುವ ಫೋನ್​ ಅನ್ನೇ ಗಿಫ್ಟ್​ ಆಗಿ ಪಡೆದಿದ್ದಾನೆ.

ಇದು ಆಶ್ಚರ್ಯವಾದರೂ ಸತ್ಯವಾದ ಸಂಗತಿ. ಎಂಐ ಫೋನುಗಳ ಅಭಿಮಾನಿಯಾಗಿರುವ ಕಮಲ್​ ಅಹಮದ್​ ಹೆಸರಿನ ಯುವಕ, ಡಿಸೆಂಬರ್​ 11ರಂದು ಟ್ವಿಟ್ಟರ್​ನಲ್ಲಿ ಒಂದು ಪೋಸ್ಟ್​ ಶೇರ್​ ಮಾಡಿದ್ದರು. ನನಗೆ ಎಂಐ 10ಟಿ ಪ್ರೋ ಮೊಬೈಲ್​ ಸಿಗುವವರೆಗೂ ನಾನು ಮದುವೆಯಾಗುವುದಿಲ್ಲ ಎಂದು ಟ್ವೀಟ್​ನಲ್ಲಿ ಹೇಳಿಕೊಂಡಿದ್ದರು.

ಆಶ್ಚರ್ಯವೆಂದರೆ, ಆತ ಈ ರೀತಿ ಟ್ವೀಟ್​ ಮಾಡಿ, ಕೇವಲ 10 ದಿನಕ್ಕೆ ಅಂದರೆ ಡಿಸೆಂಬರ್​ 21ಕ್ಕೆ ಶಾವೊಮಿ ಸಂಸ್ಥೆಯು ಯುವಕನಿಗೆ ಎಂಐ 10ಟಿ ಪ್ರೋ ಫೋನನ್ನು ಉಡುಗೊರೆಯಾಗಿ ಕಳುಹಿಸಿಕೊಟ್ಟಿದೆ. ಆ ಫೋನನ್ನು ಪಡೆದುಕೊಂಡಿರುವ ಯುವಕ, ಇದೊಂದು ಅದ್ಭುತವಾದ ಫೋನು ಎಂದು ಹೇಳಿದ್ದಾರೆ. ಫೋನನ್ನು ಸಂಸ್ಥೆ ಗಿಫ್ಟ್​ ಮಾಡಿರುವ ಬಗ್ಗೆ ಟ್ವಿಟ್ಟರ್​ನಲ್ಲಿ ಹೇಳಿಕೊಂಡಿದ್ದಾರೆ.

ಅದಾದ ನಂತರ ಯುವಕನ ಟ್ವೀಟ್​ನ್ನು ರಿಟ್ವೀಟ್​ ಮಾಡಿರುವ ಶಾವೊಮಿಯ ಉಪಾಧ್ಯಕ್ಷ ಮತ್ತು ಶಿಯೋಮಿ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಮನು ಕುಮಾರ್ ಜೈನ್, "ಈಗ ನೀವು ಮದುವೆಯಾಗಲು ಸಿದ್ಧರಿದ್ದೀರಿ ಎಂದು ನಾನು ಭಾವಿಸುತ್ತೇನೆ" ಎಂದು ಹೇಳಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net