

ನವದೆಹಲಿ: ಸಾಮಾಜಿಕ ಜಾಲತಾಣದಲ್ಲಿ ಪ್ರಚಾರ ಗಿಟ್ಟಿಸಿಕೊಳ್ಳಬೇಕು, ನಮ್ಮ ವಿಡಿಯೋಗಳು ಲಕ್ಷಾಂತರ ವೀಕ್ಷಣೆ ಪಡೆಯಬೇಕೆಂಬ ಹಪಾಹಪಿಯಲ್ಲಿ ಕೆಲವೊಂದಿಷ್ಟು ಜನ ಎಂತಹ ಕೀಳು ಮಟ್ಟಕ್ಕೂ ಇಳಿಯಲು ಸಿದ್ಧರಿರುತ್ತಾರೆ. ಸಾರ್ವಜನಿಕ ಸ್ಥಳಗಳಲ್ಲಿ ಬೇಜವಾಬ್ದಾರಿ ಮೆರೆದು ರೀಲ್ಸ್ನಂತಹ ಶಾರ್ಟ್ ವಿಡಿಯೋಗಳನ್ನು ಮಾಡುತ್ತಾರೆ. ಇದೀಗ ಇಲ್ಲೊಬ್ಬ ಯುವಕ ಸ್ನಾನದ ಟವೆಲ್ ಧರಿಸಿ, ದೆಹಲಿ ಮೆಟ್ರೋದಲ್ಲಿ ಸಂಚರಿಸಿದ್ದಾನೆ. ಇದನ್ನು ವಿಡಿಯೋ ಮಾಡಿ ಇನ್ಸ್ಟಾಗ್ರಾಂನಲ್ಲಿ ಹರಿಬಿಟ್ಟಿದ್ದಾನೆ.
ಮೋಹಿತ್ ಗೌಹರ್ ಎಂಬ ವಿಡಿಯೋ ಕ್ರಿಯೇಟರ್ ದೆಹಲಿ ಮೆಟ್ರೋದಲ್ಲಿ ಬನಿಯನ್ ಹಾಗೂ ಸ್ನಾನದ ಟವೆಲ್ ಧರಿಸಿ ಓಡಾಡಿದ್ದಾನೆ. ಈತನ ವರ್ತನೆ ಮಹಿಳಾ ಪ್ರಯಾಣಿಕರಿಗೆ ಇರಿಸುಮುರುಸು ತರುವಂತಿದೆ. ಈ ಹಿಂದೆಯೂ ಈತ ಮೆಟ್ರೋದಲ್ಲಿ ವಿಚಿತ್ರ ಪ್ರದರ್ಶನಗಳನ್ನು ಪ್ರದರ್ಶಿಸಿದ್ದ.
ಸಾರ್ವಜನಿಕ ಸಂಚಾರ ವ್ಯವಸ್ಥೆಯಲ್ಲಿ ಈತನ ಓಡಾಟ ಕಂಡು, ಸಹಪ್ರಯಾಣಿಕರು ಗೊಂದಲಕ್ಕೀಡಾಗಿದ್ದಾರೆ. ಕೆಲ ಮಹಿಳಾ ಪ್ರಯಾಣಿಕರು ಈತನ ವರ್ತನೆ ನೋಡಿ ನಕ್ಕಿದ್ದಾರೆ. ಇಷ್ಟಾದರೂ ಯಾವುದೇ ಮುಜುಗರವಿಲ್ಲದೆ ಮೋಹಿತ್ ಗೌಹರ್ ಮೆಟ್ರೋದಲ್ಲಿ ಓಡಾಡಿದ್ದಾನೆ.
ಈತನ ವಿಡಿಯೋ ವೈರಲ್ ಆಗುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಟೀಕೆಗಳು ವ್ಯಕ್ತವಾಗಿದೆ. ಅದರಲ್ಲೂ ಸಾಕಷ್ಟು ಭಧ್ರತೆ ಇರುವಂತಹ ಮೆಟ್ರೋ ನಿಲ್ದಾಣಕ್ಕೆ ಆರೆಬೆತ್ತಲೆಯಾಗಿ ಈತ ಹೇಗೆ ಪ್ರವೇಶ ಪಡೆದು ಎಂದು ಪ್ರಶ್ನಿಸುತ್ತಿದ್ದಾರೆ. ಸಾರ್ವಜನಿಕ ಸ್ಥಳದಲ್ಲಿ ಮುಜುಗರ ತರುವಂತಹ ವರ್ತೆನೆ ತೋರಿದ ಯುವಕನನ್ನು ಪತ್ತೆ ಹಚ್ಚಿ ಕ್ರಮ ಜರುಗಿಸಬೇಕೆ ಎಂದು ನೆಟ್ಟಿಗರು ಒತ್ತಾಯಿಸುತ್ತಿದ್ದಾರೆ. (ಏಜೆನ್ಸೀಸ್)