Viral Video: ತೆಲಂಗಾಣದಲ್ಲಿ ನಡೆಯಿತು ಆಘಾತಕಾರಿ ಘಟನೆ; ಮನೆಗೆ ನುಗ್ಗಿದ 100 ಜನರಿಂದ ವೈದ್ಯೆಯ ಅಪಹರಣ!

Kidnap
Published on

ತೆಲಂಗಾಣ: ನವೀನ್ ರೆಡ್ಡಿ ಎಂಬ 26 ವರ್ಷದ ಯುವಕ ಹಾಗೂ ವೈಶಾಲಿ ಎಂಬ ವೈದ್ಯೆ ಮದುವೆಯಾಗುವುದಾಗಿ ನಿರ್ಧರಿಸಿದ್ದರು. ಆದರೆ 24 ವರ್ಷದ ವೈದ್ಯೆ ವೈಶಾಲಿ ತನ್ನ ದಂತ ವೈದ್ಯಕೀಯ ಶಿಕ್ಷಣ ಮುಗಿಯುತ್ತಿದ್ದಂತೆ ತನ್ನ ನಿರ್ಧಾರವನ್ನು ಬದಲಿಸಿಕೊಂಡಿದ್ದಳು. ಇದಕ್ಕೆ ಸಿಟ್ಟಾದ ನವೀನ್ ರೆಡ್ಡಿ ಸುಮಾರು 100 ಮಂದಿಯೊಂದಿಗೆ ಆಕೆಯ ಮನೆಗೆ ತೆರಳಿ ವೈದ್ಯೆಯನ್ನು ಅಪಹರಣ ಮಾಡಿದ್ದಾನೆ. ಈ ಆಘಾತಕಾರಿ ಘಟನೆ ರಂಗಾ ರೆಡ್ಡಿ ಜಿಲ್ಲೆಯ ಆದಿಬಟ್ಲಾದಲ್ಲಿ ನಡೆದಿದೆ.

ಅಪಹರಣ ವಿಡಿಯೋ ವೈರಲ್ ಆಗುತ್ತಿದ್ದು, ವಿಡಿಯೋದಲ್ಲಿ ಸಾಕಷ್ಟು ಜನರು ವೈದ್ಯೆಯ ಮನೆಯ ವಠಾರದಲ್ಲಿ ದಾಂಧಲೆ ನಡೆಸಿ, ಅಲ್ಲಿದ್ದ ವಾಹನಗಳ ಗಾಜು ಒಡೆದು ಹಾನಿ ಮಾಡುತ್ತಿರುವುದನ್ನು ಕಾಣಬಹುದು. ಸುಮಾರು 100ಕ್ಕೂ ಅಧಿಕ ಮಂದಿ ಯುವಕರು ತಮ್ಮ ಮನೆಗೆ ನುಗ್ಗಿ ತಮ್ಮ ಮಗಳು ವೈಶಾಲಿಯನ್ನು ಬಲವಂತವಾಗಿ ಕರೆದೊಯ್ದು ಮನೆಯನ್ನು ಧ್ವಂಸ ಮಾಡಿದ್ದಾರೆ ಎಂದು ಬಾಲಕಿಯ ಪೋಷಕರು ಆರೋಪಿಸಿದ್ದಾರೆ.

ಘಟನೆಯ ಸಂಬಂಧ ಪೋಷಕರು ನೀಡಿರುವ ದೂರಿನಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಈ ಘಟನೆ ಶುಕ್ರವಾರ (ಡಿ.09) ಬೆಳಗ್ಗೆ 10 ಗಂಟೆಯ ಆಸುಪಾಸಿನಲ್ಲಿ ನಡೆದಿದೆ ಎಂದು ವರದಿಯಾಗಿದೆ. ಸದ್ಯ ಪೊಲೀಸರು ಈಗಾಗಲೇ 16 ಆರೋಪಿಗಳನ್ನು ಬಂಧಿಸಲಾಗಿದ್ದು, 6 ಗಂಟೆಯೊಳಗೆ ಯುವತಿಯನ್ನು ರಕ್ಷಿಸಿದ್ದಾರೆ ಎಂದು ವರದಿಯಾಗಿದೆ. ಅಪಹರಣ ಕೃತ್ಯದಲ್ಲಿ ಭಾಗಿಯಾಗಿರುವ ಇತರರನ್ನು ಕೂಡ ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಮುಖ ಆರೋಪಿ 26 ವರ್ಷದ ನವೀನ್ ರೆಡ್ಡಿ ಈಗಾಗಲೇ ವೈಶಾಲಿಯೊಂದಿಗೆ ಮದುವೆಯಾಗಲು ನಿರ್ಧರಿಸಿದ್ಧೆ. ಆದರೆ ಆಕೆ ಡೆಂಟಿಸ್ಟ್​ ಆದ ಬಳಿಕ ಆಕೆಯ ಪೋಷಕರು ಅವಳ ಮನಸ್ಸು ಬದಲಾಯಿಸಿ, ನನ್ನಿಂದ ದೂರ ಆಗವಂತೆ ಮಾಡಿದ್ದಾರೆ. ಹೀಗಾಗಿ, ಅವರ ಮನೆಗೆ ನುಗ್ಗಿ ಆಕೆಯನ್ನು ಎಳೆದುಕೊಂಡು ಹೋಗಿದ್ದೇವೆ ಎಂದು ವಿಚಾರಣೆಯ ವೇಳೆ ನವೀನ್ ರೆಡ್ಡಿ ಪೊಲೀಸರಿಗೆ ತಿಳಿಸಿರುವುದು ವರದಿಯಾಗಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net