

ಬೆಂಗಳೂರು: ನಗರ ಹಾಗೂ ಹೊರವಲಯದಲ್ಲಿ ಪುಡಿ ರೌಡಿಗಳ ಹಾವಳಿ ಹೆಚ್ಚಾಗಿದೆ. ದೂರದ ಊರುಗಳಿಂದ ಬಂದು ಕಷ್ಟು ಪಟ್ಟು ದುಡಿಯುತ್ತಿರುವವರನ್ನೇ ಗುರಿಯಾಗಿಸಿಕೊಂಡು ದಬ್ಬಾಳಿಕೆ ಮಾಡುತ್ತಿರು ಘಟನೆಗಳು ಬೆಳಕಿಗೆ ಬರುತ್ತಿವೆ. ಇಂತಹ ಘಟನೆಗಳು ಶ್ರಮ ವಹಿಸಿ ದುಡಿಯುತ್ತಿರುವ ವರ್ಗದ ಮಂದಿಯ ಚಿಂತೆಗೆ ಕಾರಣವಾಗಿದೆ. ಹೀಗಾಗಿ ರೌಡಿಸಂ ಹೆಸರಿನಲ್ಲಿ ಶ್ರಮಿಕ ವರ್ಗಕ್ಕೆ ತೊಂದರೆ ಕೊಡುತ್ತಿರುವ ಪುಡಿ ರೌಡಿಗಳನ್ನು ಪೊಲೀಸ್ ಇಲಾಖೆ ಮಟ್ಟಹಾಕಬೇಕಾಗಿದೆ.
ಬೆಂಗಳೂರಿನಲ್ಲಿ ಪುಡಿ ರೌಡಿಗಳ ದಬ್ಬಾಳಿಗೆ ಹೆಚ್ಚಾಗುತ್ತಿದೆ ಎಂಬ ದೂರುಗಳು ಹೆಚ್ಚಾಗಿ ಕೇಳಿ ಬರುತ್ತಿರುವಂತೆ, ಎಚ್ಎಲ್ ಕುಂದನಹಳ್ಳಿ ಗೇಟ್ ಬಳಿ, ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಯುವಕರಾದ ಉಡುಪಿ ಜಿಲ್ಲೆಯ ಬೈಂದೂರು ಮೂಲದ ನವೀನ್ ಹಾಗೂ ಪ್ರಜ್ವಲ್ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದೆ. ಈ ಘಟನೆ ಅಂಗಡಿಯಲ್ಲಿದ್ದ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಬ್ರಹ್ಮಲಿಂಗೇಶ್ವರ ಬೇಕರಿ ಬೈಂದೂರಿನ ಯುವಕರು ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು. ಈ ವೇಳೆ ನಾಲ್ಕೈದು ಜನರಿಂದ ಯುವಕರ ಗುಂಪೊಂದು ಬಂದು ಸಿಗರೇಟ್ ಖರೀದಿಸಿ, ಹಣ ಪಾವತಿಸದೆ ಸುಮ್ಮನಾಗಿದ್ದಾರೆ. ಹಣ ಕೊಡಿ ಎಂದು ಅಂಗಡಿಯಾತ ಕೇಳಿದಾಗ ಗುಂಪಿನಲ್ಲಿದ್ದ ಒಬ್ಬ ವ್ಯಕ್ತಿಯೊಬ್ಬ ನಿಮ್ಮ ಓನರ್ ಯಾರು? ಎಲ್ಲಿದ್ದಾನೆ ಎಂದು ಕೇಳಿದ್ದಾನೆ. ಉತ್ತರವಾಗಿ, ಅಂಗಡಿ ಮಾಲೀಕ ಊರಿನಲ್ಲಿ ಇದ್ದಾನೆ ಎಂದಿದ್ದಾನೆ. ಈ ವೇಳೆ ಮತ್ತೊಬ್ಬ ಯುವಕ ಏಕಾಏಕಿ ಅಂಗಡಿಯೊಳಗೆ ನುಗ್ಗಿ, ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾನೆ. ಅಂಗಡಿಯೊಳಗಿದ್ದ ಇನ್ನೊಬ್ಬ ಯುವಕ, ತಡೆಯಲು ಬಂದಾಗ ಆತನ ಮೇಲೂ ಹಲ್ಲೆ ಮಾಡಿದ್ದಾರೆ.
ಇಷ್ಟಾಗುತ್ತಿದ್ದಂತೆ ಯುವಕರ ಗುಂಪು ಅಂಗಡಿಯೊಳಗೆ ನುಗ್ಗಿ, ಅಲ್ಲಿದ್ದ ವಸ್ತುಗಳನ್ನೆಲ್ಲಾ ಚೆಲ್ಲಾಪಿಲ್ಲಿ ಮಾಡಿ, ಹೆಲ್ಮೆಟ್ ಮುಂತಾದ ವಸ್ತುಗಳಿಂದ ಥಳಿಸಿದ್ದಾರೆ. ಇಷ್ಟಕ್ಕೆ ಸುಮ್ಮನಾಗದೆ ಅಂಗಡಿಯಲ್ಲಿದ್ದ ಅಮಾಯಕ ಹುಡುಗರ ಮುಖ ಹಾಗೂ ಹೊಟ್ಟೆಯ ಭಾಗಕ್ಕೆ ಹಲ್ಲೆ ಮಾಡಿದ್ದಾರೆ. ಇವರ ಪುಂಡಾಟಿಕೆ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಕಷ್ಟ ಪಟ್ಟು ದುಡಿಯುತ್ತಿರುವ ಹುಡುಗರ ಮೇಲೆ ಬೆಂಗಳೂರಿನಲ್ಲಿ ಮಾರಣಾಂತಿಕ ಹಲ್ಲೆ ದಿನೇ ದಿನೇ ಹೆಚ್ಚಾಗುತ್ತಿರುವುದಕ್ಕೆ ಈ ಘಟನೆ ಸಾಕ್ಷಿಯಾಗಿದೆ. ಸದ್ಯ ಪುಂಡಾಟಿಕೆ ಮೆರೆದ ಗುಂಪನ್ನು ಪತ್ತೆ ಹಚ್ಚಿ, ತಕ್ಕ ಶಾಸ್ತಿ ಮಾಡಬೇಕೆಂಬ ಕೂಗು ಬೈದೂರಿನ ನಾಗರೀಕರಿಂದ ಕೇಳಿಬಂದಿದೆ. ಸದ್ಯ ಬೆಂಗಳೂರಿನಲ್ಲಿರುವ ಬೈಂದೂರು ನಾಗರೀಕರು ತಮ್ಮ ಊರಿನ ಯುವಕರಿಗೆ ನ್ಯಾಯ ಕೊಡಿಸಲು ಮುಂದಾಗಿದ್ದು, ಎಚ್ಎಎಲ್ ಪೊಲೀಸ್ ಠಾಣೆಗೆ ತೆರಳಿ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ಬೇಕರಿಯಲ್ಲಿದ್ದ ನವೀನ್ ಹಾಗೂ ಪ್ರಜ್ವಲ್ಗೆ ಗಂಭೀರ ಗಾಯಗಳಾಗಿದ್ದು, ಖಾಸಗಿ ಅಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದೆ. ಸದ್ಯ ಪುಂಡಾಟಿಕೆ ಮೆರೆದ ಆರೋಪಿಗಳ ಮೇಲೆ ಎಚ್ಎಎಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೇಕರಿ ಹುಡುಗರ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಬೇಕರಿ ಹಾಗೂ ಉದ್ಯಮಿದಾರರ ಸಂಘದ ವತಿಯಿಂದ ಎಚ್ಎಎಲ್ ಪೊಲೀಸ್ ಠಾಣೆಯ ಮುಂದೆ ಪ್ರತಿಭಟನೆ ನಡೆದಿದೆ. ಕೂಡಲೇ ಆರೋಪಿಗಳನ್ನು ಬಂಧಿಸಬೇಕು. ಒಂದು ವೇಳೆ ಪುಡಿ ರೌಡಿಗಳನ್ನು 24 ಗಂಟೆಯ ಒಳಗೆ ಬಂಧನ ಮಾಡಿಲ್ಲ ಅಂದರೆ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಬೈಂದೂರು ಯುವಕರಾದ ನವೀನ್ ಹಾಗೂ ಪ್ರಜ್ವಲ್ ಮೇಲೆ ಅನಗತ್ಯವಾಗಿ ಪುಡಿ ರೌಡಿಗಳು ಬೆಂಗಳೂರಿನಲ್ಲಿ ಹಲ್ಲೆ ನಡೆಸಿದ್ದು, ಈ ಬಗ್ಗೆ ಯುವಕರ ಜತೆ ಮಾತನಾಡಿ ವಿವರ ಪಡೆಯಲಾಗಿದೆ. ಹಲ್ಲೆ ಮಾಡಿದವರ ಮೇಲೆ ಸೂಕ್ತ ಕ್ರಮಕೈಗೊಳ್ಳುವಂತೆ ಬೆಂಗಳೂರು ಪೋಲಿಸ್ ಕಮೀಷನರ್ ಪ್ರತಾಪ್ ರೆಡ್ಡಿ ಅವರ ಜೊತೆ ಮಾತನಾಡಿ, ಹುಡುಗರಿಗೆ ಆದ ಅನ್ಯಾಯದ ಬಗ್ಗೆ ನ್ಯಾಯ ಒದಗಿಸುವಂತೆ ವಿನಂತಿಸಲಾಗಿದೆ ಎಂದು ಬೈಂದೂರು ಶಾಸಕ ಬಿ.ಎಮ್. ಸುಕುಮಾರ ಶೆಟ್ಟಿ ಹೇಳಿದ್ದಾರೆ.