5 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಕೊಲೆ ಯತ್ನ ಪ್ರಕರಣದ ಆರೋಪಿ ಅಂದರ್; ಬಂಧನಕ್ಕೆ ನೆರವಾದ ಎಂ-ಸಿಸಿಟಿಎನ್ ಮೊಬೈಲ್ ಆ್ಯಪ್

ಎಂ-ಸಿಸಿಟಿಎನ್ ಮೊಬೈಲ್ ಆ್ಯಪ್
Published on

ಬೆಂಗಳೂರು: ಕೊಲೆ ಯತ್ನ ಪ್ರಕರಣದಲ್ಲಿ ಭಾಗಿಯಾಗಿ ಕಳೆದ ಐದು ವರ್ಷಗಳಿಂದ ನ್ಯಾಯಾಲಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಆರೋಪಿಯೊಬ್ಬನನ್ನು ರಾಜಗೋಪಾಲನಗರ ಪೊಲೀಸರು ಬೆರಳು ಮುದ್ರೆ ಪರಿಶೀಲನೆ (ಎಂ-ಸಿಸಿಟಿಎನ್‌ಎಸ್) ಮೂಲಕ ಬಂಧಿಸಿದ್ದಾರೆ.

ಮಂಡ್ಯ ಮೂಲದ ವಂಸತ್ ಬಂಧಿತ ಆರೋಪಿ. ಇತ್ತೀಚೆಗೆ ಎಲ್ಲ ಪೊಲೀಸ್ ಠಾಣೆಗಳಿಗೂ ಎಂ-ಸಿಸಿಟಿಎನ್ ಮೊಬೈಲ್ ಆ್ಯಪ್ ಮೂಲಕ ಬೆರಳು ಮುದ್ರೆ ಪರಿಶೀಲನೆಗಾಗಿ ಚಿಕ್ಕ ಬೆರಳು ಮುದ್ರೆ ಡಿವೈಸ್ ಅನ್ನು ವಿತರಣೆ ಮಾಡಲಾಗಿತ್ತು. ಈ ಡಿವೈಸ್ ಉಪಯೋಗಿಸಿಕೊಂಡು ಮೊಬೈಲ್ ಅಪ್ಲಿಕೇಷನ್ ಮುಖಾಂತರ ಅನುಮಾನಾಸ್ಪದ ವ್ಯಕ್ತಿಗಳ ಬೆರಳು ಮುದ್ರೆಯನನು ಪರಿಶೀಲಿಸಿದರೆ, ಆ ವ್ಯಕ್ತಿಯು ಈ ಹಿಂದೆ ಯಾವುದಾದರೂ ಪ್ರಕರಣಗಳಲ್ಲಿ ಭಾಗಿಯಾಗಿದ್ದರೆ ಮಾಹಿತಿ ತಿಳಿದು ಬರುತ್ತದೆ.

ರಾಜಗೋಪಾಲನಗರ ಠಾಣೆ ಎಎಸ್‌ಐ ರವಿಕುಮಾರ್ ಮತ್ತು ಸಿಬ್ಬಂದಿ ಹೊಯ್ಸಳ ವಾಹನದಲ್ಲಿ ಗಸ್ತಿನಲ್ಲಿದ್ದಾಗ ಡಿ.5 ರ ರಾತ್ರಿ ವ್ಯಕ್ತಿಯೊಬ್ಬ ಅನುಮಾನಾಸ್ಪದವಾಗಿ ಓಡಾಡುತ್ತಿರುವುದನ್ನು ಗಮನಿಸಿದ ಪೊಲೀಸರು ಆತನನ್ನು ವಿಚಾರಣೆ ನಡೆಸಿದ್ದಾರೆ. ನಂತರ ಎಂ-ಸಿಸಿಟಿಎನ್‌ಎಸ್ ಮೊಬೈಲ್ ಆ್ಯಪ್ ಮೂಲಕ ಡಿವೈಸ್ ಬಳಸಿಕೊಂಡು ಆ ವ್ಯಕ್ತಿಯ ಬೆರಳು ಮುದ್ರೆಯನ್ನು ಪರಿಶೀಲಿಸಿದ್ದಾಗ ಆ ವ್ಯಕ್ತಿಯ ಮಾಹಿತಿ ಪೊಲೀಸರ ದತ್ತಾಂಶದಲ್ಲಿರುವುದು ದೃಢಪಟ್ಟಿದೆ. ನಂತರ ಆತನನ್ನು ಠಾಣೆಗೆ ಕರೆತಂದು ಕೂಲಂಕುಷವಾಗಿ ವಿಚಾರಣೆ ಮಾಡಿ ಪೊಲೀಸರ ದತ್ತಾಂಶದಲ್ಲಿ ಪರಿಶೀಲಿಸಿದಾಗ ಆರೋಪಿಯು ಮಂಡ್ಯ ಜಿಲ್ಲೆಯ ಕೆ.ಆರ್.ಎಸ್ ಪೊಲೀಸ್ ಠಾಣೆಯ ಕೊಲೆ ಯತ್ನ ಪ್ರಕರಣದಲ್ಲಿ ಭಾಗಿಯಾಗಿರುವುದು ತಿಳಿದು ಬಂದಿದೆ.

ಆರೋಪಿಯು ಕೆಲ ವರ್ಷಗಳಿಂದ ಬೆಂಗಳೂರಿನ ಲಗ್ಗೆರೆಯ ಭೈರವೇಶ್ವರನಗರದಲ್ಲಿ ವಾಸವಾಗಿದ್ದಕೊಂಡು ಆಟೋ ಚಾಲಕ ವೃತ್ತಿ ಮಾಡುತ್ತಿದ್ದ. ಪ್ರಕರಣವೊಂದರಲ್ಲಿ ಆರೋಪಿಯು ಬಂಧಿತನಾಗಿ ಜೈಲಿಗೆ ಹೋಗಿ ಜಾಮೀನಿನ ಮೇಲೆ ಹೊರಬಂದು 2017 ರಿಂದ ನ್ಯಾಯಾಲಯದ ವಿಚಾರಣೆಗೆ ಹಾಗರಾಗದೆ ಸುಮಾರು 5 ವರ್ಷಗಳಿಂದ ತಲೆಮರೆಸಿಕೊಂಡಿದ್ದ. ನ್ಯಾಯಾಲಯವು ಈ ಆರೋಪಿಯ ವಿರುದ್ಧ ಉದ್ಘೋಷಣೆ ಮತ್ತು ಅರೆಸ್ಟ್ ವಾರೆಂಟ್ ಹೊರಡಿಸಿರುವುದರಿಂದ ಮುಂದಿನ ಕಾನೂನು ಕ್ರಮಕ್ಕಾಗಿ ಮಂಡ್ಯ ಜಿಲ್ಲೆಯ ಕೆ.ಆರ್.ಎಸ್ ಪೊಲೀಸ್ ಠಾಣೆ ಅಧಿಕಾರಿಗಳಿಗೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net