ಪ್ರೀತಿ ಹೆಸರಲ್ಲಿ ಒತ್ತಾಯ, ಚಿತ್ರಹಿಂಸೆ! ಒಪ್ಪದೆ ಹೋದ್ರೆ ಈ ಇಂಜೆಕ್ಷನ್​ ಕೊಡ್ತೀನಿ ಎಂದು ಯುವತಿಗೆ ಬೆದರಿಕೆ

ವಿಜಯವಾಣಿ - 2024-11-16T203051.450
Published on

ಹೈದರಾಬಾದ್​: ಪ್ರೀತಿಯಲ್ಲಿ ಗೆಲುವು ಕಂಡವರು ಒಂದಷ್ಟು ಪ್ರೇಮಿಗಳಾದರೆ, ಅದನ್ನು ಉಳಿಸಿಕೊಳ್ಳುವ ಪ್ರಯತ್ನದಲ್ಲಿ ಸೋಲು ಕಂಡವರು ಮತ್ತೊಂದಷ್ಟು ಮಂದಿ. ಇನ್ನೂ ಕೆಲವರು ಈ ಎರಡಕ್ಕೂ ಸೇರದವರು. ಅಂದರೆ, ಪ್ರೀತಿಯಲ್ಲಿ ಇರದಿದ್ದರೂ ಪ್ರೇಮದ ಹೆಸರಿನಲ್ಲಿ ನಂಬಿಕೆ ದ್ರೋಹ, ವಂಚನೆಗೆ ಒಳಗಾಗುವವರು. ಕೆಲವೊಮ್ಮೆ ಇಂತಹ ಜಂಜಾಟಗಳಿಗೆ ಸಿಲುಕಿ, ಪ್ರಾಣವನ್ನು ಕಳೆದುಕೊಂಡ ನಿದರ್ಶನಗಳು ಉಂಟು. ಸದ್ಯ ಈ ಘಟನೆ ಕೂಡ ಅದನ್ನೇ ಒತ್ತಿ ಹೇಳಿದೆ. ಮನಸ್ಸಿನಿಂದ ಹುಟ್ಟದ ಪ್ರೀತಿಯನ್ನು ಕೇವಲ ದೈಹಿಕ ಆಸೆಗಾಗಿ, ತನ್ನ ಚಟಕ್ಕಾಗಿ ಬಲವಂತ ಮಾಡುತ್ತಿದ್ದ ಓರ್ವ ಯುವಕ, ತನ್ನನ್ನು ಪ್ರೀತಿಸು ಇಲ್ಲವಾದರೆ, ಏಡ್ಸ್​ ಇಂಜೆಕ್ಷನ್​ ಕೊಡ್ತೀನಿ ಎಂದು ಯುವತಿಗೆ ಮಾನಸಿಕ ಹಿಂಸೆ ಕೊಡುತ್ತಿದ್ದ ಘಟನೆ ಇದೀಗ ತಡವಾಗಿ ಬೆಳಕಿಗೆ ಬಂದಿದೆ.

ನಾಗಾರ್ಜುನ ಸಾಗರ ಮೂಲದ ಆರೋಪಿ ಯುವಕ ವಿಜಯ್​ ಕುಮಾರ್​ ಎಂಬಾತ, ಯುವತಿಯೊಬ್ಬಳಿಗೆ ತನ್ನನ್ನು ಪ್ರೀತಿಸು, ಪ್ರೀತಿಸಬೇಕು. ಇಲ್ಲವಾದರೆ, ನಿನ್ನ ನಾನು ಬಿಡೋದಿಲ್ಲ. ಪ್ರೀತಿಸದಿದ್ದರೆ ಏಡ್ಸ್ ಇಂಜೆಕ್ಷನ್ ಕೊಡ್ತೀನಿ ಎಂದು ಚಿತ್ರಹಿಂಸೆ ನೀಡಿದ್ದಾನೆ. "ಎಲ್ಲಿ ಹೋದರೂ, ಬಂದರೂ ವಿಜಯ್​ ಹಿಂಸೆ ತಪ್ಪುತ್ತಿರಲಿಲ್ಲ. ನನ್ನ ಹೆತ್ತವರ ಜತೆಗೆ ಮನೆಯಿಂದ ಹೊರಹೋಗಲು ಆಗ್ತಿರಲಿಲ್ಲ. ಸ್ನೇಹಿತರಾಗಿದ್ದಾಗ ಜತೆಯಲ್ಲಿ ಓಡಾಡಿದ ಒಂದಷ್ಟು ಫೋಟೋಗಳನ್ನು ಮುಂದಿಟ್ಟು ಬ್ಲ್ಯಾಕ್​ಮೇಲ್ ಮಾಡ್ತಿದ್ದ. ಹಣ ಕೊಡು ಎಂದು ಪೀಡಿಸುತ್ತಿದ್ದ" ಎಂದು ಮನನೊಂದ ಯುವತಿ ದೂರಿನಲ್ಲಿ ಉಲ್ಲೇಖಿಸಿದ್ದಾಳೆ.

ಈ ಪ್ರೀತಿ ಒಪ್ಪಿಕೋ, ಇಲ್ಲ...

ಯುವಕನ ಕಿರುಕುಳ ತಾಳಲಾರದ ಯುವತಿ ಹಯತ್ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಸಂತ್ರಸ್ತ ಯುವತಿ ಹೇಳಿಕೆಯ ಪ್ರಕಾರ, "ನಾಗಾರ್ಜುನ ಸಾಗರದ ವಿಜಯ್ ಕುಮಾರ್ ಎಂಬ ಯುವಕ ನನ್ನನ್ನು ಟ್ರಾಪ್ ಮಾಡಿದ್ದಾನೆ. ತಮ್ಮ ಗೆಳೆತನದ ದಿನಗಳಲ್ಲಿ ತೆಗೆದ ಫೋಟೋಗಳನ್ನು ತೋರಿಸಿ ಬ್ಲ್ಯಾಕ್‌ಮೇಲ್ ಮಾಡಿ ಹಣ ವಸೂಲಿ ಮಾಡುತ್ತಿದ್ದಾನೆ. ಕಾಲೇಜಿಗೆ ಹೋಗುವಾಗ ಹಾಗೂ ಬಸ್‌ನಲ್ಲಿ ಹೋಗುವಾಗ ಕಿರುಕುಳ ನೀಡುತ್ತಿದ್ದಾನೆ. ಈ ಪ್ರೀತಿ ಒಪ್ಪಿಕೋ, ಇಲ್ವಾ, ಏಡ್ಸ್ ಇಂಜೆಕ್ಷನ್ ಕೊಡೋದಾಗಿ ಬೆದರಿಕೆ ಹಾಕಿದ್ದಾನೆ. ಇಷ್ಟೇ ಅಲ್ಲದೆ ನಮ್ಮ ಪೋಷಕರಿಗೆ ಕೊಲೆ ಬೆದರಿಕೆ ಹಾಕಿ, ಮನೆಯ ಸುತ್ತಮುತ್ತಲೇ ಕಣ್ಣಾಯಿಸುತ್ತಿರುತ್ತಾನೆ" ಎಂದು ಯುವತಿ ದೂರಿನಲ್ಲಿ ತನ್ನ ಕಷ್ಟ ವಿವರಿಸಿದ್ದಾಳೆ.

ಇನ್ನು ಮೂವರು ಯುವತಿಯರಿಗೆ

"ನನ್ನ ಹಿಂದೆಯೇ ಬರುತ್ತಿದ್ದ ಆತ ನನ್ನನ್ನು ಮುಟ್ಟಲು ಪ್ರಯತ್ನಸುತ್ತಿದ್ದ. ಜತೆಗೆ ಲೈಂಗಿಕ ಕಿರುಕುಳ ನೀಡ್ತಿದ್ದ. ವಿಜಯ್​ ಏನು ಮಾಡುತ್ತಾನೋ ಎಂಬ ಭಯ ನನ್ನಲ್ಲಿ ಕಾಡುತ್ತಿದೆ. ಇನ್ನು ಮೂವರು ಯುವತಿಯರಿಗೆ ವಿಜಯ್ ವಂಚಿಸಿದ್ದಾನೆ" ಎಂದು ಸಂತ್ರಸ್ತೆ ಹೇಳಿದ್ದಾಳೆ. ಆತನಿಂದ ತನ್ನನ್ನು ಮತ್ತು ತನ್ನ ಕುಟುಂಬವನ್ನು ರಕ್ಷಿಸುವಂತೆ ಪೊಲೀಸರನ್ನು ಮನವಿ ಮಾಡಿಕೊಂಡಿದ್ದಾಳೆ. ಯುವತಿ ನೀಡಿದ ದೂರಿನ ಅನ್ವಯ ಇದೀಗ ಪೊಲೀಸರು ತನಿಖೆ ಆರಂಭಿಸಿರುವುದಾಗಿ ತಿಳಿಸಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net