

ಅಹಮದಾಬಾದ್: ತನ್ನ ಪತ್ನಿ ತನ್ನ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳುತ್ತಾರೆ ಎಂದರೆ ಅಂಥ ಪತಿಗೆ ಸ್ವರ್ಗ ಮೂರೇ ಗೇಣು. ಆದರೆ, ಇಲ್ಲಿ ತನ್ನ ತಾಯಿಯ ಆರೈಕೆ ಮಾಡಿದ ಪತ್ನಿಗೆ ಪತಿಯೊಬ್ಬ ವಿಚ್ಛೇದನದ ಬಳುವಳಿ ಕೊಟ್ಟು ಆಕೆಯ ಪಾಲಿಗೆ ಖಳನಾಯಕನಾಗಿದ್ದಾನೆ.
ವಡೋದರ ಮೂಲದ ರಿಯಾಲ್ಟಿ ಡೆವೆಲಪರ್ ಈ ಕೃತ್ಯ ಎಸಗಿದವನು. ಇದೀಗ ಆತನ ಪತ್ನಿ ಮತ್ತು ಇಬ್ಬರು ಮಕ್ಕಳು ಬೀದಿಗೆ ಬರುವಂತಾಗಿದೆ.
ರಿಯಾಲ್ಟಿ ಡೆವೆಲಪರ್ನ ತಾಯಿ ಇತ್ತೀಚೆಗೆ ಹೃದಯ ಶಸ್ತ್ರಚಿಕಿತ್ಸೆಗೆ ಒಳಾಗಿದ್ದರು. ಈತನ ಪತ್ನಿ ದಿನವೂ ಆಸ್ಪತ್ರೆಗೆ ಹೋಗಿ ಅತ್ತೆಯ ಆರೈಕೆ ಮಾಡುತ್ತಿದ್ದಳು. ಆತನ ತಾಯಿ ಚೇತರಿಸಿಕೊಂಡ ಬಳಿಕ ಅವರನ್ನು ಮನೆಗೆ ಕರೆತರಲಾಗಿತ್ತು. ಅವರ ಜತೆಗೆ ಈತನ ಪತ್ನಿ ಮತ್ತು ಮಕ್ಕಳೂ ಮನೆಗೆ ಮರಳಿದ್ದರು.
ತಾಯಿಯನ್ನು ಮಾತ್ರ ಒಳಗೆ ಕರೆದುಕೊಂಡ ಆತ, ಜ್ವರದಿಂದ ಬಳಲುತ್ತಿರುವೆ. ನಿನಗೆ ಕರೊನಾ ಸೋಂಕು ತಗುಲಿರಬಹುದು. ಹೋಗಿ ಚಿಕಿತ್ಸೆ ಪಡೆದುಕೊಂಡ ನಂತರ ಮನೆಗೆ ಬಾ ಎಂದು ಒತ್ತಾಯಿಸಲಾರಂಭಿಸಿದ. ಆದರೆ ಆಕೆ ಇದಕ್ಕೆ ಒಪ್ಪದೇ ಹೋದಾಗ ಆಕೆಯನ್ನು ಚೆನ್ನಾಗಿ ಥಳಿಸಿ, ಇಬ್ಬರು ಮಕ್ಕಳೊಂದಿಗೆ ಆಕೆಯನ್ನು ಮನೆಯಿಂದ ಹೊರದೂಡಿದ್ದ.
ಅಹಮದಾಬಾದ್ನಲ್ಲಿ ಇದ್ದ ತಮ್ಮ ಇನ್ನೊಂದು ಫ್ಲ್ಯಾಟ್ನಲ್ಲಿ ಮಕ್ಕಳೊಂದಿಗೆ ಇದ್ದ ಪತ್ನಿ ಚಿಕಿತ್ಸೆ ಪಡೆಯುತ್ತಿದ್ದಳು. ಈ ವಿಷಯ ತಿಳಿದು ಅಲ್ಲಿಗೆ ತೆರಳಿದ ಮಹಾಶಯ, ನೀನು ಏಕೆ ಇಲ್ಲಿದ್ದೀಯಾ? ಇಲ್ಲಿ ಇರಲು ನಿನಗೆ ಹೇಳಿದ್ದು ಯಾರು ಎಂದು ದಬಾಯಿಸಿ, ಕತ್ತು ಹಿಡಿದು ಮನೆಯಿಂದ ಹೊರದೂಡಿದ್ದಾನೆ. ಅಲ್ಲದೆ, ವಿಚ್ಛೇದನ ನೀಡುವುದಾಗಿ ಬೆದರಿಕೆ ಹಾಕಿದ್ದಾನೆ.
ಇದರಿಂದ ಎಚ್ಚೆತ್ತುಕೊಂಡ ಆಕೆ, ಪೊಲೀಸ್ ಠಾಣೆಗೆ ಹೋಗಿ ತನ್ನ ಪತಿಯ ದೌರ್ಜನ್ಯವನ್ನು ವಿವರಿಸಿ, ದೂರು ದಾಖಲಿಸಿದ್ದಾಳೆ.