ವ್ಯಕ್ತಿಯ ಶ್ವಾಸಕೋಶದಲ್ಲಿ ಹಲ್ಲಿನ ಸೆಟ್​ ಪತ್ತೆ! ರೋಗಿಯ ವಿವರಣೆ ಕೇಳಿ ವೈದ್ಯರೇ ಶಾಕ್

ವಿಜಯವಾಣಿ - 2024-12-15T181937.715
Published on

ಆಂಧ್ರಪ್ರದೇಶ: ನಿದ್ರೆಗೆ ಜಾರಿದ್ದ ವ್ಯಕ್ತಿಯೊಬ್ಬರು, ತಮಗೆ ಕೊಡಲಾಗಿದ್ದ ಹಲ್ಲಿನ ಸೆಟ್​ ಅನ್ನೇ ನುಂಗಿದ ಅಚ್ಚರಿ ಘಟನೆ ವಿಶಾಖಪಟ್ಟಣಂನ ಖಾಸಗಿ ಆಸ್ಪತ್ರೆಯಲ್ಲಿ ಸಂಭವಿಸಿದೆ.

52 ವರ್ಷದ ವ್ಯಕ್ತಿ ಹಲವಾರು ವರ್ಷಗಳಿಂದ ಈ ಹಲ್ಲಿನ ಸೆಟ್​ ಬಳಸುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ನಿದ್ರೆಗೆ ಜಾರಿದ್ದ ವೇಳೆ ಅದನ್ನು ಹಾಕಿಕೊಂಡಿದ್ದು, ಸೆಟ್​ ಜಾರಿರುವುದು ಗೊತ್ತಿಲ್ಲ ಎಂದಿದ್ದಾರೆ. ಹಲ್ಲಿನ ಸೆಟ್​ ನಿಧಾನವಾಗಿ ನೀರಿನಂತೆ ಆತನ ಗಂಟಲಿನೊಳಗೆ ಇಳಿದಿದ್ದು, ನೇರವಾಗಿ ಬಲ ಶ್ವಾಸಕೋಶದ ಮಧ್ಯ ಭಾಗದಲ್ಲಿ ಸಿಲುಕಿದೆ. ಇದು ವೈದ್ಯರ ಪರೀಕ್ಷೆ ನಂತರ ಸ್ಪಷ್ಟವಾಗಿದೆ.

ಕಿಮ್ಸ್ ಐಕಾನ್ ಆಸ್ಪತ್ರೆಯ ಕನ್ಸಲ್ಟೆಂಟ್ ಇಂಟರ್ವೆನ್ಷನಲ್ ಪಲ್ಮನಾಲಜಿಸ್ಟ್ ಡಾ. ಸಿ.ಎಚ್. ಭರತ್, ವ್ಯಕ್ತಿಯ ಪರಿಸ್ಥಿತಿಯನ್ನು ಕಂಡು ಮೊದಲು ಪ್ರಾಥಮಿಕ ಪರೀಕ್ಷೆಗೆ ಒಳಪಡಿಸಿದ್ದಾರೆ. ಈ ವೇಳೆ ಆತನ ಎಡ ಶ್ವಾಸಕೋಶ ಮತ್ತು ಬಲ ಶ್ವಾಸಕೋಶದ ಭಾಗಗಳು ಸಾಮಾನ್ಯವಾಗಿ ಕಾರ್ಯನಿರ್ವಹಿಸುತ್ತಿದ್ದರಿಂದ ತೀವ್ರ ಉಸಿರಾಟದ ತೊಂದರೆಗಳು ಉಂಟಾಗಿಲ್ಲ. ಅದೇನೇ ಇದ್ದರೂ, ಹಲ್ಲಿನ ಸೆಟ್​ ಮಧ್ಯೆ ಭಾಗದಲ್ಲಿ ಸಿಲುಕಿದ್ದ ಕಾರಣ ನಿರಂತರ ಕೆಮ್ಮು ಮಾತ್ರ ಕಾಣಿಸಿಕೊಂಡಿರುವುದು ಅದೃಷ್ಟ ಎಂದು ವೈದ್ಯರು ತಿಳಿಸಿದ್ದಾರೆ.

ಎಕ್ಸ್-ರೇ ಮತ್ತು ಸಿಟಿ ಸ್ಕ್ಯಾನ್​ಗಳನ್ನು ನಡೆಸಿದ ವೈದ್ಯರು, ಶ್ವಾಸಕೋಶದಲ್ಲಿ ಸಿಲುಕಿರುವುದನ್ನು ಖಚಿತಪಡಿಸಿಕೊಂಡಿದ್ದಾರೆ. ಆ ನಂತರ ಸೂಕ್ತ ಚಿಕಿತ್ಸೆಯ ಮೂಲಕ ವ್ಯಕ್ತಿಯ ಶ್ವಾಸಕೋಶದಿಂದ ಹಲ್ಲಿನ ಸೆಟ್​ ಹೊರ ತೆಗೆಯುವಲ್ಲಿ ವೈದ್ಯರು ಯಶಸ್ವಿಯಾಗಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net