

ಪಟನಾ: ಐದು ವರ್ಷದ ಮಗುವಿನ ಮುಂದೆಯೇ ತಾಯಿ ಮತ್ತು ಅಕ್ಕನ ಭೀಕರ ಕೊಲೆ ಮಾಡಿರುವ ಘಟನೆ ಬಿಹಾರದ ಜಮುಯಿ ಪ್ರದೇಶದ ಕಲ್ಯಾಣ್ಪುರ ಮಹೋಲ್ ಗ್ರಾಮದಲ್ಲಿ ನಡೆದಿದೆ. ಕೊಲೆ ಮಾಡಿರುವ ವ್ಯಕ್ತಿಯ ಬಗ್ಗೆ ಮಗುವೇ ಮಾಹಿತಿ ನೀಡಿರುವುದಾಗಿ ತಿಳಿಸಲಾಗಿದೆ.
ಬಾಲಕನ ತಂದೆ ಪ್ರಮೋದ್ ತಂತಿ ಮಾರ್ಬೆಲ್ ಕೂರಿಸುವ ಕೆಲಸ ಮಾಡುತ್ತಿದ್ದ. ಪತ್ನಿ ರಿತಾ ದೇವಿ ಬಗ್ಗೆ ಆತನಿಗೆ ಅನುಮಾನವಿತ್ತಂತೆ. ಅದೇ ಕಾರಣಕ್ಕೆ ಮನೆಯಲ್ಲಿ ಆಗಾಗ ಜಗಳವಾಗುತ್ತಿತ್ತು. ಇತ್ತೀಚೆಗೆ ಇದೇ ಬೇಸರದಿಂದ ಪ್ರಮೋದ್ ಆತ್ಮಹತ್ಯೆ ಪ್ರಯತ್ನವನ್ನೂ ಮಾಡಿದ್ದನಂತೆ. ಆದರೆ ಸ್ಥಳೀಯರು ಆತನನ್ನು ರಕ್ಷಿಸಿದ್ದರು. ಬುಧವಾರ ರಾತ್ರಿ ಮನೆಗೆ ಬಂದ ಪ್ರಮೋದ್ ಪತ್ನಿಯೊಂದಿಗೆ ಜಗಳವಾಡಿದ್ದಾನೆ. ಜಗಳ ತಾರಕಕ್ಕೇರಿದ್ದು, ಪ್ರಮೋದ್ಗೆ ಸಿಟ್ಟು ಹೆಚ್ಚಾಗಿದೆ. ಸಿಟ್ಟಿನಿಂದ ಹೆಂಡತಿ ಮತ್ತು 7 ವರ್ಷದ ಮಗಳು ಜ್ಯೋತಿಯ ಕುತ್ತಿಗೆಯನ್ನು ಹರಿತವಾದ ಚಾಕುವಿನಿಂದ ಕೊಯ್ದಿದ್ದಾನೆ. ಮನೆಯಲ್ಲಿದ್ದ ಮಗನೆದುರಿಗೇ ಪತ್ನಿ ಮತ್ತು ಮಗಳನ್ನು ಕೊಂದು ಮಲಗಿಸಿ ಅಲ್ಲಿಂದ ಕಾಲ್ಕಿತ್ತಿದ್ದಾನೆ.
ಬಾಲಕನಿಗೆ ಮನೆಯಲ್ಲಿ ಏನು ನಡೆದಿದೆ ಎನ್ನುವುದೂ ತಿಳಿದಿಲ್ಲ. ಪಕ್ಕದಲ್ಲೇ ಇದ್ದ ಸಂಬಂಧಿಕರ ಮನೆಗೆ ತೆರಳಿದ ಬಾಲಕ ಅಮ್ಮ ಅಕ್ಕ ಏಳುತ್ತಿಲ್ಲ, ಮೈಯೆಲ್ಲ ರಕ್ತವಾಗಿದೆ ಎಂದು ಮಾಹಿತಿ ಕೊಟ್ಟಿದ್ದಾನೆ. ಇದನ್ನು ಕೇಳಿದ ತಕ್ಷಣ ಮನೆಗೆ ಓಡಿ ಬಂದ ಸಂಬಂಧಿಕರಿಗೆ ಎರಡು ಮೃತ ದೇಹಗಳು ಕಂಡು ಬಂದಿದೆ. ಈ ರೀತಿ ಮಾಡಿದ್ದು ಯಾರು ಎಂದು ಕೇಳಿದಾಗ ತನ್ನ ಅಪ್ಪನೇ ಎಂದು ಬಾಲಕ ತಿಳಿಸಿದ್ದಾನೆ. ಪೊಲೀಸರಿಗೆ ದೂರು ನೀಡಲಾಗಿದ್ದು, ಆರೋಪಿಗಾಗಿ ಹುಡುಕಾಡಲಾಗುತ್ತಿದೆ. (ಏಜೆನ್ಸೀಸ್)