ಯೂನಿಫಾರಂ ತೊಟ್ಟ ಪೊಲೀಸಪ್ಪನ ಕೆನ್ನೆಗೆ ಬಾರಿಸಿದ! ಈಗ ಪೊಲೀಸರ ಅತಿಥಿಯಾದ

cop
Published on

ಲಖನೌ: ವ್ಯಕ್ತಿಯೊಬ್ಬ ಯೂನಿಫಾರಂ ತೊಟ್ಟ ಪೊಲೀಸ್​ ಅಧಿಕಾರಿಯ ಕಪಾಳಕ್ಕೆ ಸಾರ್ವಜನಿಕರೆದುರಲ್ಲಿ ಮತ್ತೆ ಮತ್ತೆ ಹೊಡೆದಿರುವ ಘಟನೆಯೊಂದು ಉತ್ತರಪ್ರದೇಶದ ಲಖನೌನಲ್ಲಿ ನಡೆದಿದೆ. ಈ ಪ್ರಸಂಗದ ವಿಡಿಯೋ ತುಣುಕು ಸಾಮಾಜಿಕ ಮಾಧ್ಯಮದಲ್ಲಿ ವೈರಲ್​ ಆದ ಬೆನ್ನಲ್ಲೇ ನಾಲ್ಕು ಜನರನ್ನು ಯುಪಿ ಪೊಲೀಸರು ಬಂಧಿಸಿದ್ದಾರೆ.

ಪಿಲಿಭಿತ್​ ಕೋತ್ವಾಲಿಯ ಸಬ್​ಇನ್ಸ್​ಪೆಕ್ಟರ್​ ವಿನೋದ್​ ಕುಮಾರ್​ ಮೈನಾರಿಟಿ ಕಮಿಷನ್​ ಕಛೇರಿಯಿಂದ ಬರುತ್ತಿರುವಾಗ ಅವರಿದ್ದ ಕಾರು, ಬೈಕ್​ ಅಡ್ಡ ಬಂದ ಪರಿಣಾಮವಾಗಿ ಹೋಟೆಲ್​​ ಒಂದರ ಎದುರಿಗೆ ನಿಂತಿದ್ದ ಕಾರುಗಳಿಗೆ ಗುದ್ದಿತು. ತಕ್ಷಣ ಹೊಟೆಲ್​ನಿಂದ ಆಚೆ ಬಂದ ಐವರು ಪುರುಷರ ಗುಂಪು, ಆ ಪೊಲೀಸನ್ನು ಹೊಡೆಯಲು ಆರಂಭಿಸಿದರು. ವೈರಲ್ ಆಗಿರುವ ವಿಡಿಯೋ ತುಣುಕಲ್ಲಿ ಆಶಿಶ್​ ಶುಕ್ಲ ಎಂಬ ವ್ಯಕ್ತಿ, "ಪೋಲಿಸ್​ಗಿರಿ ತೋರಿಸುತ್ತೀಯಾ" ಎನ್ನುತ್ತಾ ​ ಅಧಿಕಾರಿಗೆ ಎರಡು ಮೂರು ಬಾರಿ ಕೆನ್ನೆಗೆ ಬಾರಿಸಿದ್ದು ಕಂಡುಬಂದಿದೆ ಎನ್ನಲಾಗಿದೆ.

ಹಲ್ಲೆಗೊಳಗಾದ ಪೊಲೀಸ್​ ಅಧಿಕಾರಿ ವಿನೋದ್​ಕುಮಾರ್​ ನೀಡಿದ ದೂರಿನ ಮೇರೆಗೆ ಆಶಿಶ್​ ಶುಕ್ಲ, ಪ್ರಿಯಾಂಕ್​ ಮಾಥುರ್​, ಪ್ರವೇಂದ್ರ ಕುಮಾರ ಮತ್ತು ಪ್ರಾಂಜುಲ್ ಮಾಥುರ್​ ಎಂಬುವರನ್ನು ಬಂಧಿಸಲಾಗಿದೆ. ಮತ್ತೊಬ್ಬ ಆರೋಪಿಯ ಪತ್ತೆ ಕಾರ್ಯ ಆರಂಭವಾಗಿದೆ ಎಂದು ಹಿರಿಯ ಅಧಿಕಾರಿಗಳು ಹೇಳಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net