

ಚಂಡೀಗಡ: ಪಂಜಾಬ್ನ ಕೀರತ್ಪುರದಲ್ಲಿ ರೈತ ನಾಯಕರು ಇಂದು ಬಾಲಿವುಡ್ ನಟಿ ಕಂಗನಾ ರಣಾವತ್ ಕಾರನ್ನು ಸುತ್ತುವರೆದು ಘೋಷಣೆಗಳನ್ನು ಕೂಗಿದರು. ಘೇರಾವ್ ಮಾಡಿದ ದೊಡ್ಡ ಗುಂಪನ್ನು ಚದುರಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರವುದಕ್ಕಾಗಿ ಪೊಲೀಸ್ ಸಿಬ್ಬಂದಿ ಶ್ರಮಿಸಬೇಕಾಯಿತು ಎಂದು ವರದಿ ತಿಳಿಸಿದೆ.
ಚಂಡೀಗಡ-ಉನ ಹೈವೇನಲ್ಲಿ ರೋಪರ್ ನಗರದ ಬಂಗಾ ಸಾಹಿಬ್, ಕೀರತ್ಪುರ್ ಸಾಹಿಬ್ ಬಳಿ ಈ ಘಟನೆ ನಡೆಯಿತು ಎಂದು ಕಂಗನಾ ಆರೋಪಿಸಿದ್ದಾರೆ. ಈ ಸಂದರ್ಭದ ಚಿತ್ರಗಳು ಜಾಲತಾಣದಲ್ಲಿ ವೈರಲ್ ಆಗಿವೆ. ರೈತ ಮುಖಂಡ ರಾಕೇಶ್ ತಿಕಾಯತ್ ಈ ಬಗ್ಗೆ ತಮಗೆ ಯಾವುದೇ ಮಾಹಿತಿ ಇಲ್ಲ. ಘಟನೆಯ ವಿವರ ತಿಳಿದ ನಂತರವೇ ಪ್ರತಿಕ್ರಿಯಿಸುತ್ತೇನೆ ಎಂದಿದ್ದಾರೆ.
ತಮ್ಮ ವಿವಾದಾತ್ಮಕ ಸೋಷಿಯಲ್ ಮೀಡಿಯ ಪೋಸ್ಟ್ಗಳಿಗೆ ಹೆಸರಾಗಿರುವ ಕಂಗನಾ, ರೈತರ ಪ್ರತಿಭಟನೆಯ ಬಗ್ಗೆ ಮಾಡಿದ ಇನ್ಸ್ಟಾಗ್ರಾಂ ಪೋಸ್ಟ್ ಹಿನ್ನೆಲೆಯಲ್ಲಿ ಬೆದರಿಕೆ ಕರೆಗಳು ಬರುತ್ತಿವೆ ಎಂದು ಕಳೆದ ಮಂಗಳವಾರ ಎಫ್ಐಆರ್ ಸಲ್ಲಿಸಿದ್ದರು ಎಂದು ವರದಿ ತಿಳಿಸಿದೆ. (ಏಜೆನ್ಸೀಸ್)