

ಜೈಪುರ: ವೆಬ್ ಸಿರೀಸ್ನಲ್ಲಿ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದ್ದ ಆಂಗ್ಲ ಭಾಷೆಯ 'ಮನಿ ಹೈಸ್ಟ್' ವೀಕ್ಷಿಸಿದ ವ್ಯಕ್ತಿಯೊಬ್ಬ, ಅದರಲ್ಲಿ ಮೂಡಿಬಂದ ಪಾತ್ರವೊಂದರ ಉಡುಗೆಯನ್ನು ತೊಟ್ಟು, ಮಾಡಿದ ಎಡವಟ್ಟಿಗೆ ಇದೀಗ ಪೊಲೀಸರ ಅತಿಥಿಯಾದ ಘಟನೆ ರಾಜಸ್ಥಾನದ ಜೈಪುರದಲ್ಲಿ ವರದಿಯಾಗಿದೆ.
'ಮನಿ ಹೈಸ್ಟ್' ಪಾತ್ರಧಾರಿಯಂತೆ ಉಡುಗೆ ತೊಟ್ಟು, ಕಾರಿನ ಮೇಲಿಂದ ಹಣ ಎಸೆದ ವ್ಯಕ್ತಿಯ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದ್ದು, 10 ಮತ್ತು 20 ರೂ. ಸೇರಿದಂತೆ ಹಲವು ನೋಟುಗಳನ್ನು ಸುರಿದ ವಿಲಕ್ಷಣ ಘಟನೆಗೆ ಜೈಪುರ ಸಾಕ್ಷಿಯಾಗಿದೆ. ಈ ದೃಶ್ಯ ನೋಡಿದ ಹಲವರು ಅಚ್ಚರಿ ವ್ಯಕ್ತಪಡಿಸಿದ್ದು, ಈ ರೀತಿ ಹುಚ್ಚಾಟ ಪ್ರದರ್ಶಿಸಲು ಕಾರಣವೇನು ಎಂಬ ಪ್ರಶ್ನೆಯನ್ನು ಮುಂದಿಟ್ಟಿದ್ದಾರೆ.
ರಸ್ತೆಯ ಮಧ್ಯೆ ಕಾರು ನಿಲ್ಲಿಸಿ, ಹಣ ಎಸೆದ ವ್ಯಕ್ತಿ ವಾಹನ ಸಂಚಾರಕ್ಕೆ ತೊಂದರೆ ಮಾಡಿದ್ದಲ್ಲದೇ, ಸಾರ್ವಜನಿಕರಿಗೆ ಮುಜುಗರ ಉಂಟು ಮಾಡಿದ್ದಾನೆ. ಈ ಘಟನೆಯ ವಿಡಿಯೋ ಕ್ಷಣಮಾತ್ರದಲ್ಲಿ ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ಹರಿದಾಡಿದ್ದು, ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ.
ಇದನ್ನೂ ಓದಿ: ಬಾಳೆಹೊನ್ನೂರು ಪಟ್ಟಣ ಪಂಚಾಯಿತಿಯಾಗಿಸಲು ಕ್ರಮ
ಜೈಪುರದ ಮಾಳವೀಯ ನಗರದ ಗೌರವ್ ಟವರ್ ಬಳಿ ಈ ಘಟನೆ ನಡೆದಿದೆ ಎಂದು ವರದಿ ಉಲ್ಲೇಖಿಸಿದ್ದು, ವೈರಲ್ ವಿಡಿಯೋ ಬೆನ್ನಲ್ಲೇ ಜವಾಹರ್ ಸರ್ಕಲ್ ಪೊಲೀಸ್ ಠಾಣೆ ಪೊಲೀಸರು ಯುವಕನನ್ನು ಬಂಧಿಸಿದ್ದಾರೆ ಎಂದು ಪೂರ್ವ ಡಿಸಿಪಿ ಜ್ಞಾನಚಂದ್ ಯಾದವ್ ತಿಳಿಸಿದ್ದಾರೆ.
ಬಂಧಿತ ಯುವಕ, ಇದು ಕೇವಲ ಮೋಜಿಗಾಗಿ ಮಾಡಿದೆ ಎಂದು ಪೊಲೀಸರಿಗೆ ವಿಚಾರಣೆ ವೇಳೆ ಹೇಳಿದ್ದಾನೆ. ಘಟನೆಯ ಸಂಪೂರ್ಣ ದೃಶ್ಯವನ್ನು ಸ್ಥಳೀಯರೊಬ್ಬರು ಸೆರೆಹಿಡಿದದ್ದೇ, ವ್ಯಾಪಕ ವೈರಲ್ಗೆ ಕಾರಣವಾಗಿದೆ. ಸದ್ಯ ಪೊಲೀಸರು ಹೆಚ್ಚಿನ ವಿಚಾರಣೆಯನ್ನು ನಡೆಸುತ್ತಿದ್ದಾರೆ ಎಂದು ವರದಿ ತಿಳಿಸಿದೆ,(ಏಜೆನ್ಸೀಸ್).