ಬಡ್ಡಿ ಸಮೇತ ಟಿಕೆಟ್ ಹಣ, ಇಲ್ಲವೇ 50 ಲಕ್ಷ ರೂ. ದಂಡ ಕಟ್ಟಿ! ರೈಲ್ವೆ ಇಲಾಖೆಗೆ ಎಚ್ಚರಿಕೆ ಕೊಟ್ಟ ಪ್ರಯಾಣಿಕ | Compensation

ವಿಜಯವಾಣಿ - 2025-01-31T180812.491
Published on

Compensation: ಉತ್ತರ ಪ್ರದೇಶದಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳಕ್ಕೆ ತೆರಳಲು ಬಯಸಿ, ರೈಲ್ವೆ ಟಿಕೆಟ್ ಬುಕ್ಕಿಂಗ್ ಮಾಡಿಕೊಂಡಿದ್ದ ವ್ಯಕ್ತಿಗೆ ರೈಲು ಹತ್ತುವಾಗ ಆದ ಕಹಿ ಅನುಭವವೇ ಇದೀಗ ಟಿಕೆಟ್​ ಹಣವನ್ನು ಬಡ್ಡಿ ಸಮೇತ ಹಾಗೂ 50 ಲಕ್ಷ ರೂ. ದಂಡ ಕಟ್ಟುವಂತೆ ನೋಟಿಸ್​ ರವಾನಿಸಲು ಕಾರಣವಾಗಿದೆ.

ಬಿಹಾರದ ಮುಜಫರ್‌ಪುರ ಮೂಲದವನಾದ ಈತ ಭಾರತೀಯ ರೈಲ್ವೆ ಇಲಾಖೆಗೆ ನೋಟಿಸ್ ಕಳುಹಿಸಿ, "ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ನಾನು ಮತ್ತು ನನ್ನ ಕುಟುಂಬ ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ಗೆ ಹೋಗುವ ರೈಲಿನಲ್ಲಿ ಪ್ರಯಾಣಿಸಲು ಸಾಧ್ಯವಾಗಿಲ್ಲ. ಅಧಿಕಾರಿಗಳ ಬೇಜವಾಬ್ದಾರಿಯೇ ಇದಕ್ಕೆ ಕಾರಣ" ಎಂದು ಗಂಭೀರವಾಗಿ ಆರೋಪಿಸಿದ್ದಾರೆ.

"ಜನವರಿ 26ರಂದು ಸ್ವತಂತ್ರ ಸೇನಾನಿ ಎಕ್ಸ್‌ಪ್ರೆಸ್‌ಗಾಗಿ ಎಸಿ-3 ಟಿಕೆಟ್‌ಗಳನ್ನು ಖರೀದಿಸಿದ್ದೆ. ಮೊದಲೇ ಬುಕ್ಕಿಂಗ್​ಗಳನ್ನು ಮಾಡಿಕೊಂಡು, ನನ್ನ ಅತ್ತೆ-ಮಾವನನ್ನು ಜತೆಯಲ್ಲಿ ಕರೆದುಕೊಂಡು ಹೋಗಿದ್ದೆ. ಈ ವೇಳೆ ರೈಲಿನ ಕೋಚ್‌ನ ಬಾಗಿಲು ಒಳಗಿನಿಂದ ಲಾಕ್ ಆಗಿದ್ದರಿಂದ, ನಾವು ರೈಲು ಹತ್ತಲು ಸಾಧ್ಯವಾಗಲಿಲ್ಲ. ನಾವು ಪರದಾಡುತ್ತಿದ್ದರು ಯಾವೊಬ್ಬ ಅಧಿಕಾರಿಯೂ ಸಹಾಯಕ್ಕೆ ಬರಲಿಲ್ಲ. ಎಷ್ಟೇ ಪ್ರಯತ್ನಿಸಿದ್ರು ರೈಲ್ವೆ ಸಿಬ್ಬಂದಿಯಿಂದ ಸಹಾಯ ಸಿಗಲಿಲ್ಲ. ನೋಡ ನೋಡುತ್ತಿದ್ದಂತೆ ರೈಲು ಕೂಡ ಹೊರಟುಹೋಯಿತು" ಎಂದು ದೂರುದಾರ ಜನಕ್ ಕಿಶೋರ್ ಝಾ ಅಲಿಯಾಸ್ ರಾಜನ್ ಆರೋಪಿಸಿದ್ದಾರೆ.

ತನಗಾದ ಕಹಿ ಅನುಭವ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯತೆಗೆ ಸಿಡಿದೆದ್ದ ಝಾ, ಭಾರತೀಯ ರೈಲ್ವೆ ಮಂಡಳಿಯ ಅಧ್ಯಕ್ಷರು ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗೆ 15 ದಿನಗಳ ಒಳಗಾಗಿ ತನಗೆ ಟಿಕೆಟ್​ ಮೊತ್ತವನ್ನು ಬಡ್ಡಿ ಸಮೇತ ಮರುಪಾವತಿ ಮಾಡಬೇಕು ಎಂದು ಒತ್ತಾಯಿಸಿದ್ದಾರೆ. ಇಷ್ಟಲ್ಲದೇ ಕಾನೂನು ಕ್ರಮ ಕೈಗೊಳ್ಳುವುದಾಗಿಯೂ ಎಚ್ಚರಿಸಿ, ನಿಗದಿತ ಸಮಯದೊಳಗೆ ಹಣ ವಾಪಾಸ್​ ಮಾಡದಿದ್ದರೆ 50 ಲಕ್ಷ ರೂ. ಪರಿಹಾರ ನೀಡಬೇಕು ಎಂದು ಕಳಿಸಲಾದ ನೋಟಿಸ್​ನಲ್ಲಿ ಉಲ್ಲೇಖಿಸಿದ್ದಾರೆ.

"144 ವರ್ಷಕ್ಕೊಮ್ಮೆ ಸಂಭವಿಸುವ ಇಂತಹ ಪುಣ್ಯದ ಮಹಾಕುಂಭ ಮೇಳಕ್ಕೆ ಹೋಗುವ ಅವಕಾಶವನ್ನು ಕಳೆದುಕೊಂಡಿರುವುದು ಕೇವಲ ನನಗೆ ಆರ್ಥಿಕ ನಷ್ಟ ಮಾತ್ರವಲ್ಲದೆ ಭಾವನಾತ್ಮಕ ಮತ್ತು ಆಧ್ಯಾತ್ಮಿಕ ದುಃಖವನ್ನೂ ಉಂಟುಮಾಡಿದೆ" ಎಂದು ತಮ್ಮ ಬೇಸರ ಹೊರಹಾಕಿದ್ದಾರೆ. ಸೇವೆಯಲ್ಲಿನ ಕೊರತೆಯನ್ನು ಆರೋಪಿಸಿ ಗ್ರಾಹಕ ಸಂರಕ್ಷಣಾ ಕಾಯ್ದೆಯಡಿಯಲ್ಲಿ ರೈಲ್ವೆ ಇಲಾಖೆ ವಿರುದ್ಧ ಪ್ರಕರಣವನ್ನು ದಾಖಲಿಸಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net