

ವಾಷಿಂಗ್ಟನ್ ಡಿಸಿ: ಜನನದ ಆಧಾರದ ಮೇಲೆ ಪೌರತ್ವ ನೀಡುವ ಕಾನೂನಿನ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್(Donald Trump) ಟೀಕೆಗಳನ್ನು ಮಾಡಿದ್ದಾರೆ. ಈ ಕಾನೂನು ಮಾಡಿದಾಗ ಜೀತದಾಳುಗಳ ಮಕ್ಕಳಿಗೆ ಪೌರತ್ವ ನೀಡುವುದು ಅದರ ಉದ್ದೇಶವಾಗಿತ್ತು. ಅದನ್ನು ಹೊರತು ಪಡಿಸಿ ಈ ಕಾನೂನು ಪ್ರಪಂಚದಾದ್ಯಂತದ ಜನರು ಅಮೆರಿಕಕ್ಕೆ ಬಂದು ತಮ್ಮ ಕಸವನ್ನು ಇಲ್ಲಿ ಎಸೆಯಲು ಅಲ್ಲ ಎಂದಿದ್ದಾರೆ.
ಡೊನಾಲ್ಡ್ ಟ್ರಂಪ್ ಜನವರಿ 20ರಂದು ಅಧಿಕಾರ ಸ್ವೀಕರಿಸಿದ ಮೊದಲ ದಿನವೇ ಜನನದ ಆಧಾರದ ಮೇಲೆ ಪೌರತ್ವ ನೀಡುವ ಕಾನೂನನ್ನು ರದ್ದುಗೊಳಿಸಿದ್ದರು. ಆದರೆ ಅವರ ಆದೇಶವನ್ನು ಮರುದಿನ ಸಿಯಾಟಲ್‌ನ ಫೆಡರಲ್ ನ್ಯಾಯಾಲಯವು ರದ್ದುಗೊಳಿಸಿತು. ಇದೀಗ ನ್ಯಾಯಾಲಯದ ಈ ತೀರ್ಪನ್ನು ಪ್ರಶ್ನಿಸುವುದಾಗಿ ಹಾಗೂ ಸುಪ್ರೀಂ ಕೋರ್ಟ್ ತಮ್ಮ ಪರವಾಗಿ ತೀರ್ಪು ನೀಡಲಿದೆ ಎಂದು ಡೊನಾಲ್ಡ್ ಟ್ರಂಪ್ ವಿಶ್ವಾಸ ವ್ಯಕ್ತಪಡಿಸಿದರು.
ಜನ್ಮಸಿದ್ಧ ಪೌರತ್ವ ಕಾನೂನಿನ ಇತಿಹಾಸವನ್ನು ನೋಡಿದರೆ ಇದನ್ನು ಜೀತದಾಳುಗಳ ಮಕ್ಕಳಿಗಾಗಿ ರಚಿಸಲಾಗಿದೆ. ಇಡೀ ಜಗತ್ತು ಬಂದು ಅಮೆರಿಕವನ್ನು ನಾಶಮಾಡಲು ಆಗಿರಲಿಲ್ಲ ಎಂದು ಶ್ವೇತಭವನದಲ್ಲಿ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಈಗ ಎಲ್ಲ ರೀತಿಯ ಜನ ಇಲ್ಲಿಗೆ ಬರುತ್ತಿದ್ದಾರೆ. ಅಷ್ಟೇ ಅಲ್ಲ ಅಸಮರ್ಥರು ಇಲ್ಲಿ ಅಸಮರ್ಥ ಮಕ್ಕಳನ್ನು ಹುಟ್ಟು ಹಾಕುತ್ತಿದ್ದಾರೆ. ಈ ಕಾನೂನು ಇಲ್ಲಿ ಬಂದು ನೆಲೆಸಿದವರಿಗಾಗಿ ಅಲ್ಲ ಎಂದು ತಿಳಿಸಿದರು.
ಈ ಕಾನೂನು ರೂಪಿಸಿದಾಗ ಪರಿಪೂರ್ಣವಾಗಿದ್ದು ಜೀತದಾಳುಗಳ ಮಕ್ಕಳಿಗೆ ಪೌರತ್ವ ನೀಡಲು ತರಲಾಗಿದೆ. ಈ ಕಾನೂನನ್ನು ತಂದ ಉದ್ದೇಶ ಸರಿಯಾಗಿದೆ ಮತ್ತು ನಾನು ಅದರ ಪರವಾಗಿ 100 ಪ್ರತಿಶತ ಇದ್ದೇನೆ. ಆದರೆ ಪ್ರಪಂಚದಾದ್ಯಂತದ ಜನರು ಇಲ್ಲಿಗೆ ಬಂದು ಅಮೆರಿಕವನ್ನು ವಶಪಡಿಸಿಕೊಳ್ಳಬೇಕು ಎಂದು ಇದರ ಅರ್ಥವಲ್ಲ ಎಂದಿದ್ದಾರೆ.
2023ರಲ್ಲಿ ಅಕ್ರಮ ವಲಸಿಗರಿಗೆ 2,25,000 ರಿಂದ 2,50,000 ಮಕ್ಕಳು ಜನಿಸುತ್ತಾರೆ ಎಂದು ವಲಸೆ ಅಧ್ಯಯನ ಕೇಂದ್ರ ಅಂದಾಜಿಸಿದೆ. ಆದ್ದರಿಂದ ಈ ಪ್ರಕರಣವನ್ನು ಸುಪ್ರೀಂ ಕೋರ್ಟ್‌ನಲ್ಲಿ ಗೆಲ್ಲುವ ಮೂಲಕ ನಾವು ಸಮಸ್ಯೆಯನ್ನು ಕೊನೆಗೊಳಿಸುತ್ತೇವೆ ಎಂದು ಹೇಳಿದರು. ಈ ವಾರ ರಿಪಬ್ಲಿಕನ್ ಪಕ್ಷದ ಸಂಸದರು ಸಹ ಜನ್ಮ ಹಕ್ಕು ಪೌರತ್ವವನ್ನು ನಿಷೇಧಿಸುವ ಮಸೂದೆಯನ್ನು ಸೆನೆಟ್‌ನಲ್ಲಿ ಮಂಡಿಸಿದ್ದಾರೆ. ಅಕ್ರಮ ವಲಸಿಗರ ಮಕ್ಕಳಿಗೆ ಪೌರತ್ವ ನೀಡಬಾರದು ಎಂಬ ನಿಬಂಧನೆ ಜತೆಗೆ ತಾತ್ಕಾಲಿಕ ವೀಸಾದಲ್ಲಿ ಬಂದ ವೀಸಾ ಅವಧಿ ಮುಗಿದು ಇನ್ನೂ ಅಲ್ಲಿಯೇ ನೆಲೆಸಿರುವವರ ಮಕ್ಕಳ ಪೌರತ್ವವನ್ನು ನಿಷೇಧಿಸಬೇಕು ಎಂದು ಈ ಮಸೂದೆಯಲ್ಲಿದೆ.
ಡೊನಾಲ್ಡ್ ಟ್ರಂಪ್ ಆಡಳಿತವು ಅಮೆರಿಕದಲ್ಲಿ ಅಕ್ರಮ ವಲಸಿಗರ ವಿರುದ್ಧ ಕ್ರಮವನ್ನು ತೀವ್ರಗೊಳಿಸಿದೆ. ಕಳೆದ ವಾರವಷ್ಟೇ ಸುಮಾರು 500 ಜನರನ್ನು ಬಂಧಿಸಲಾಗಿತ್ತು ಮತ್ತು ಅವರಲ್ಲಿ 350ಕ್ಕೂ ಹೆಚ್ಚು ಜನರನ್ನು ದೇಶದಿಂದ ಬಿಡುಗಡೆ ಮಾಡಲಾಗಿದೆ. ಜನ್ಮಸಿದ್ಧ ಪೌರತ್ವಕ್ಕೆ ಅವಕಾಶವಿರುವ ವಿಶ್ವದ 33 ದೇಶಗಳಲ್ಲಿ ಅಮೆರಿಕವೂ ಒಂದಾಗಿದೆ.(ಏಜೆನ್ಸೀಸ್)