US Birthright Citizenship | ಡೊನಾಲ್ಡ್​ ಟ್ರಂಪ್ ಆದೇಶಕ್ಕೆ ನ್ಯಾಯಾಲಯದಿಂದ ತಡೆಯಾಜ್ಞೆ; ನ್ಯಾಯಾಧೀಶ ಜಾನ್ ಕೋಘೆನೂರ್ ಹೇಳಿದಿಷ್ಟು..

Untitled design - 2025-01-24T145242.220
Published on

ವಾಷಿಂಗ್ಟನ್​ ಡಿಸಿ: ಡೊನಾಲ್ಡ್​ ಟ್ರಂಪ್​ ಅಧ್ಯಕ್ಷರಾದ ನಂತರ ಅಮೆರಿಕದಲ್ಲಿ ಜನ್ಮಸಿದ್ಧ ಪೌರತ್ವಕ್ಕೆ(US Birthright Citizenship) ಸಂಬಂಧಿಸಿದಂತೆ ನೀಡಿದ್ದ ಆದೇಶಕ್ಕೆ ಅಮೆರಿಕ ನ್ಯಾಯಾಲಯ ತಡೆ ನೀಡಿದೆ. ಅಮೆರಿಕದಲ್ಲಿ ಜನನದ ಆಧಾರದ ಮೇಲೆ ಪೌರತ್ವ ನೀಡುವ ಕಾನೂನನ್ನು ಟ್ರಂಪ್ ರದ್ದುಗೊಳಿಸಿದ್ದರು. ಟ್ರಂಪ್ ಆಡಳಿತದ ನಿರ್ಧಾರವನ್ನು ಅಸಂವಿಧಾನಿಕ ಎಂದು ನ್ಯಾಯಾಧೀಶರು ತೀರ್ಪಿನಲ್ಲಿ ಸ್ಪಷ್ಟವಾಗಿ ತಿಳಿಸಿದ್ದಾರೆ.

ನಾಲ್ಕು ಡೆಮಾಕ್ರಟಿಕ್ ಆಡಳಿತದ ರಾಜ್ಯಗಳಾದ ವಾಷಿಂಗ್ಟನ್, ಅರಿಜೋನಾ, ಇಲಿನಾಯ್ಸ್ ಮತ್ತು ಒರೆಗಾನ್‌ಗಳ ಅರ್ಜಿಯನ್ನು ಪರಿಗಣಿಸುವಾಗ ಅಮೆರಿಕ ಜಿಲ್ಲಾ ನ್ಯಾಯಾಧೀಶ ಜಾನ್ ಕೋಘೆನೂರ್ ಟ್ರಂಪ್ ಆಡಳಿತದ ಆದೇಶಕ್ಕೆ ತಾತ್ಕಾಲಿಕ ತಡೆಯಾಜ್ಞೆ ನೀಡಿದ್ದಾರೆ.

ಆದೇಶ ನೀಡುವಾಗ ಕೋರ್ಟ್​ ಹೇಳಿದ್ದೇನು?

ಆದೇಶವನ್ನು ತಡೆಹಿಡಿಯುವ ಸಮಯದಲ್ಲಿ ನ್ಯಾಯಾಧೀಶ ಕೊಘನೂರ್ ಅವರು ಕೆಲವು ಬಲವಾದ ಟೀಕೆಗಳನ್ನು ಮಾಡಿದರು. ಈ ಆದೇಶ ಸಾಂವಿಧಾನಿಕ ಎಂದು ಯಾವ ಶಾಸಕರು ಹೇಗೆ ಹೇಳುತ್ತಾರೆಂದು ನನಗೆ ಅರ್ಥವಾಗುತ್ತಿಲ್ಲ ಎಂದು ಹೇಳಿದರು. ಇದು ನನ್ನ ತಿಳುವಳಿಕೆಯನ್ನು ಮೀರಿದೆ. ಟ್ರಂಪ್ ಆಡಳಿತದ ನಿರ್ಧಾರವು ಸ್ಪಷ್ಟವಾಗಿ ಅಸಂವಿಧಾನಿಕವಾಗಿದೆ. ನಾನು ನಾಲ್ಕು ದಶಕಗಳಿಂದ ನ್ಯಾಯಾಲಯದ ವ್ಯವಹಾರಗಳನ್ನು ನಿರ್ವಹಿಸುತ್ತಿದ್ದೇನೆ. ಇಂತಹ ಅಸಾಂವಿಧಾನಿಕ ನಿರ್ಧಾರ ಕೈಗೊಂಡಿರುವ ಅಂತಹ ಯಾವುದೇ ಪ್ರಕರಣ ನೆನಪಿಗೆ ಬರುತ್ತಿಲ್ಲ ಎಂದು ಹೇಳಿದ್ದಾರೆ.

ಟ್ರಂಪ್​​​ ಸರ್ಕಾರದ ವಾದವೇನು?

ಈ ಆದೇಶದ ಅಡಿಯಲ್ಲಿ ಈ ಕಾನೂನನ್ನು ಈಗ ಜನಿಸಲಿರುವ ಮಕ್ಕಳಿಗೆ ಅನ್ವಯಿಸಲಾಗುತ್ತದೆ ಎಂದು ವಾಷಿಂಗ್ಟನ್ ರಾಜ್ಯದ ಸಹಾಯಕ ಅಟಾರ್ನಿ ಜನರಲ್ ಲೆನ್ ಪೊಲೊಜೋಲಾ ವಿಚಾರಣೆಯ ಸಮಯದಲ್ಲಿ ನ್ಯಾಯಾಧೀಶರಿಗೆ ಟ್ರಂಪ್ ನೀತಿಯನ್ನು ಉಲ್ಲೇಖಿಸಿ ಹೇಳಿದರು. ಡೊನಾಲ್ಡ್ ಟ್ರಂಪ್ ಅವರ ಕ್ರಮಗಳು ಸಾಂವಿಧಾನಿಕ ಮತ್ತು ಅವುಗಳನ್ನು ನಿರ್ಬಂಧಿಸುವ ಯಾವುದೇ ನ್ಯಾಯಾಂಗ ಆದೇಶವು ಅನುಚಿತವಾಗಿದೆ ಎಂದು ನ್ಯಾಯಾಂಗ ಇಲಾಖೆಯ ವಕೀಲ ಬ್ರೆಟ್ ಶುಮೇಟ್ ವಾದಿಸಿದರು. ಆದರೆ ಶುಮೇಟ್ ಪೊಲೊಜೋಲಾ ಅವರು ಮಾತನಾಡುವುದನ್ನು ಮುಗಿಸುವ ಮೊದಲು ತಾತ್ಕಾಲಿಕ ತಡೆಯಾಜ್ಞೆಗೆ ಸಹಿ ಹಾಕಿದ್ದಾಗಿ ನ್ಯಾಯಮೂರ್ತಿ ದ್ದಾರೆ ಕೊಘೆನೂರ್ ಹೇಳಿದರು.

ಡೊನಾಲ್ಡ್​​ ಟ್ರಂಪ್ ಹೊಸ ಆದೇಶದಲ್ಲಿ ಏನಿದೆ?

ಹೊಸ ಆದೇಶದ ಪ್ರಕಾರ ಮಗು ಹುಟ್ಟಿನಿಂದಲೇ ಅಮೆರಿಕದ ಪೌರತ್ವವನ್ನು ಬಯಸಿದರೆ ಅವರ ಪಾಲಕರಲ್ಲಿ ಒಬ್ಬರು ಅಮೆರಿಕಾದ ಪ್ರಜೆಯಾಗಿರುವುದು ಕಡ್ಡಾಯವಾಗಿದೆ. ಅಲ್ಲದೆ ಒಬ್ಬರು ಗ್ರೀನ್ ಕಾರ್ಡ್ ಹೊಂದಿರಬೇಕು ಅಥವಾ ಒಬ್ಬರು ಅಮೆರಿಕ ಸೈನ್ಯದಲ್ಲಿರಬೇಕು.

ಈ ಆದೇಶವು 'ಬರ್ತ್ ಟೂರಿಸಂ' ಮತ್ತು ಅಕ್ರಮ ವಲಸಿಗರನ್ನು ನಿಲ್ಲಿಸಲು ಒಂದು ದೊಡ್ಡ ಹೆಜ್ಜೆಯಾಗಿದೆ ಎಂಬುದು ಟ್ರಂಪ್ ಅವರ ಅಭಿಪ್ರಾಯವಾಗಿದೆ. ಪೌರತ್ವವನ್ನು ಪಡೆಯಲು ವಲಸಿಗರು ಅಮೆರಿಕಕ್ಕೆ ಹೋಗಿ ತಮ್ಮ ಮಗುವಿಗೆ ಜನ್ಮ ನೀಡುತ್ತಾರೆ. ಇದರಿಂದಾಗಿ ಮಗು ಸ್ವಯಂಚಾಲಿತವಾಗಿ ಅಲ್ಲಿ ಪೌರತ್ವವನ್ನು ಪಡೆಯುತ್ತದೆ.

ಅಮೆರಿಕ ಸಂವಿಧಾನ ಏನು ಹೇಳುತ್ತದೆ?

ಅಮೆರಿಕ ಸಂವಿಧಾನದ 14ನೇ ತಿದ್ದುಪಡಿಯ ಪ್ರಕಾರ ಜನನದ ಆಧಾರದ ಮೇಲೆ ಪೌರತ್ವವನ್ನು ನೀಡುವ ಅವಕಾಶವಿದೆ. ಅರ್ಥಾತ್ ಅಮೆರಿಕದಲ್ಲಿ ಹುಟ್ಟಿದ ಪ್ರತಿ ಮಗುವೂ ಸ್ವಯಂಚಾಲಿತವಾಗಿ ಅಮೆರಿಕದ ಪ್ರಜೆಯಾಗುತ್ತದೆ. ಮಗುವಿನ ಹೆತ್ತವರ ಪೌರತ್ವವನ್ನು ಇದರಲ್ಲಿ ಪರಿಗಣನೆಗೆ ತೆಗೆದುಕೊಳ್ಳುವುದಿಲ್ಲ.

ಎಲ್ಲರಿಗೂ ಸಮಾನ ಹಕ್ಕುಗಳನ್ನು ನೀಡುವ ಉದ್ದೇಶದಿಂದ ಈ ಸಾಂವಿಧಾನಿಕ ತಿದ್ದುಪಡಿಯನ್ನು 1868ರಲ್ಲಿ ಅಮೆರಿಕದಲ್ಲಿ ಜಾರಿಗೆ ತರಲಾಯಿತು. ದೀರ್ಘಕಾಲದವರೆಗೆ ರಾಜಕೀಯ ಪಕ್ಷಗಳು ಅಕ್ರಮ ವಲಸಿಗರು ಮತ್ತು ಒಳನುಸುಳುವಿಕೆಯ ವಿಷಯವನ್ನು ನಿರಂತರವಾಗಿ ಎತ್ತುತ್ತಿವೆ. ಅದರಲ್ಲೂ ಟ್ರಂಪ್ ಇದನ್ನು ತೀವ್ರವಾಗಿ ವಿರೋಧಿಸಿದ್ದರು.

ಈ ನಿರ್ಧಾರ ಭಾರತೀಯರ ಮೇಲೂ ಪರಿಣಾಮ ಬೀರಲಿದೆ

2023ರಲ್ಲಿ 59 ಸಾವಿರ ಅಂದರೆ ಶೇ.1.5ರಷ್ಟು ಭಾರತೀಯರು ಅಮೆರಿಕದ ಪೌರತ್ವವನ್ನು ಪಡೆದಿದ್ದಾರೆ ಎಂದು ಮೂಲಗಳು ತಿಳಿಸುತ್ತವೆ. ಕಳೆದ ವರ್ಷಗಳಲ್ಲಿ ಇಲ್ಲಿ ವಾಸಿಸುವ 48 ಲಕ್ಷಕ್ಕೂ ಹೆಚ್ಚು ಭಾರತೀಯ-ಅಮೆರಿಕನ್ ಸಮುದಾಯದ ಅನೇಕ ಮಕ್ಕಳು ಜನನದ ಆಧಾರದ ಮೇಲೆ ಪೌರತ್ವವನ್ನು ಪಡೆದಿದ್ದಾರೆ. ಆದರೆ ಈಗ ಟ್ರಂಪ್ ಆದೇಶದ ನಂತರ ಇದು ಸಾಧ್ಯವಾಗುವುದಿಲ್ಲ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net