

ನ್ಯೂಯಾರ್ಕ್: ಅತ್ಯಾಚಾರ ಎಸಗಿದ ಆರೋಪದ ಮೇಲೆ ಏಳೂವರೆ ವರ್ಷ ಜೈಲು ಶಿಕ್ಷೆ ಅನುಭವಿಸಿದ್ದ ಅಮೆರಿಕದ ವ್ಯಕ್ತಿಯನ್ನು ಸುಮಾರು ಐದು ದಶಕಗಳ ನಂತರ ಬಂಧ ಮುಕ್ತಗೊಳಿಸಲಾಗಿದೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ. ಇದಕ್ಕೆ ಕಾರಣವಾಗಿದ್ದು ಹೊಸ ಡಿಎನ್ಎ ಪುರಾವೆಗಳು!
ಈಗ 72 ವರ್ಷದ ಲಿಯೊನಾರ್ಡ್ ಮ್ಯಾಕ್ರನ್ನು 1975ರಲ್ಲಿ ನ್ಯೂಯಾರ್ಕ್ ರಾಜ್ಯದ ಗ್ರೀನ್ ಬರ್ಗ್ನಲ್ಲಿ ಹದಿಹರೆಯದ ಹುಡುಗಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಬಂಧಿಸಲಾಗಿತ್ತು. ಘಟನೆ ನಡೆದ ಸಂದರ್ಭದಲ್ಲಿ ಸಂತ್ರಸ್ತೆ ಇನ್ನೊಬ್ಬ ಹುಡುಗಿಯೊಂದಿಗೆ ಶಾಲೆಯಿಂದ ಮನೆಗೆ ನಡೆದುಕೊಂಡು ಹೋಗುತ್ತಿದ್ದಳು ಎನ್ನಲಾಗಿದೆ.
ಪೊಲೀಸರು ಬಿಳಿ ಜನರ ನೆರೆಹೊರೆಯಲ್ಲಿ ಕಪ್ಪುವರ್ಣದ ಶಂಕಿತನಿಗಾಗಿ ಶೋಧವನ್ನು ನಡೆಸಿ ಸ್ವಲ್ಪ ಸಮಯದ ನಂತರ ಆಫ್ರಿಕನ್ ಅಮೆರಿಕನ್ ಮ್ಯಾಕ್ರನ್ನು ಬಂಧಿಸಿದ್ದರು.
“ಇನ್ನೋಸೆನ್ಸ್ ಪ್ರಾಜೆಕ್ಟ್ನ ಅಭಿಯಾನದ ಭಾಗವಾಗಿ ವಿಶೇಷ ತನಿಖೆ ನಡೆದಿದೆ. ಘಟನೆಯ ಸಮಯದಲ್ಲಿ ಲಭ್ಯವಿಲ್ಲದ ಡಿಎನ್ಎ ಪುರಾವೆಗಳಿಂದಾಗಿ ಇದೀಗ 72 ವರ್ಷದ ಮ್ಯಾಕ್ರನ್ನು ಅಪರಾಧಿ ಎಂದು ಘೋಷಿಸಲಾಗಿತ್ತು. ಇದೀಗ ಅಸಲಿ ಅಪರಾಧಿಯನ್ನು ಗುರುತಿಸಲಾಗಿದ್ದು ಅತ್ಯಾಚಾರ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ" ಎಂದು ವೆಸ್ಟ್ಚೆಸ್ಟರ್ ಕೌಂಟಿ ಪ್ರಾಸಿಕ್ಯೂಟರ್ ಕಚೇರಿ ಹೇಳಿಕೆಯಲ್ಲಿ ತಿಳಿಸಿದೆ. "ಇದು ಅಮೆರಿಕದ ಇತಿಹಾಸದಲ್ಲಿ ಡಿಎನ್ಎ ಪುರಾವೆಗಳಿಂದಾಗಿ ರದ್ದುಗೊಳಿಸಲ್ಪಟ್ಟ ಇನ್ನೋಸೆನ್ಸ್ ಪ್ರಾಜೆಕ್ಟ್ಗೆ ತಿಳಿದಿರುವ ದೀರ್ಘಕಾಲದ ಶಿಕ್ಷೆಯಾಗಿದೆ" ಎಂದು ಜಿಲ್ಲಾ ಅಟಾರ್ನಿ ಕಚೇರಿ ಹೇಳಿದೆ. ಬಿಳಿಯ ಜನರಿಗಿಂತ ಕಪ್ಪು ವರ್ಣದವರು ತಪ್ಪಾಗಿ ಶಿಕ್ಷೆಗೆ ಗುರಿಯಾಗುವ ಸಾಧ್ಯತೆ ಹೆಚ್ಚು ಎಂದು ಸಂಶೋಧಕರು ಹೇಳುತ್ತಾರೆ.
ಅಮೆರಿಕದ ಒಟ್ಟು ಜನಸಂಖ್ಯೆಯಲ್ಲಿ ಕಪ್ಪು ಜನರು ಕೇವಲ 13.6 ಪ್ರತಿಶತದಷ್ಟಿದ್ದರೂ, ಬಂಧಿತರು ಹೆಚ್ಚಾಗಿ ಅದೇ ವರ್ಣದವರಿದ್ದಾರೆ. 1989 ಮತ್ತು 2022ರ ನಡುವೆ ತಪ್ಪಾದ ಶಿಕ್ಷೆಯನ್ನು ಪಡೆದು ಹೊರಬಂದ ಜನರಲ್ಲಿ ಅರ್ಧಕ್ಕಿಂತ ಹೆಚ್ಚು ಜನರು ಕಪ್ಪು ವರ್ಣೀಯರು ಎಂದು ರಾಷ್ಟ್ರೀಯ ನಿರ್ದೋಷಿಗಳ ನೋಂದಣಿ ತಿಳಿಸಿದೆ.
ತನ್ನ ಮೇಲಿನ ಆರೋಪ ಸುಳ್ಳಾಗಿ ನಿರ್ದೋಶಿ ಎಂದು ಸಾಬೀತಾಗಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಮ್ಯಾಕ್, "ನಾನು ಅಂತಿಮವಾಗಿ ಸ್ವತಂತ್ರನಾಗಿದ್ದೇನೆ" ಎಂದು ಹೇಳಿದರು. (ಏಜೆನ್ಸೀಸ್)