ನಾಲ್ಕು ದಶಕಗಳಿಗೂ ಹಿಂದಿನ ಪ್ರಕರಣ ಇದು. ಇಂದಿಗೂ ಇದು ನನ್ನನ್ನು ಬೆಚ್ಚಿಸುತ್ತದೆ, ಮನುಷ್ಯ ಮನೋವ್ಯಾಪಾರದ ನಿಗೂಢ ಆಯಾಮಮವೊಂದರ ಬಗ್ಗೆ ನನ್ನನ್ನು ಮುಗ್ಧನನ್ನಾಗಿಸುತ್ತದೆ. ಮತ್ತೆ ಮತ್ತೆ ಹೀಗಾಗಲು ಪ್ರೇರಕವಾಗುವಂತಹ ಬೆಳವಣಿಗೆಗಳು ಜಗತ್ತಿನ ಮೂಲೆಮೂಲೆಗಳಲ್ಲಿ ಮತ್ತೆಮತ್ತೆ ಜರುಗುತ್ತಲೇ ಇವೆ. ಇತ್ತೀಚೆಗಂತೂ ಅವು ಆಫ್ರಿಕಾದಲ್ಲಿ ಕಾಣಬರುವುದು ಹೆಚ್ಚಾಗುತ್ತಿದೆ.
ನಾನಾಗ ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿ. 1981ರ ಅಕ್ಟೋಬರ್ ತಿಂಗಳ ಒಂದು ಸಂಜೆ ಅದು. ಭಾರತಕ್ಕೆ ಅಧಿಕೃತ ಭೇಟಿ ನೀಡಿದ್ದ ಪಶ್ಚಿಮ ಆಫ್ರಿಕಾದ ಘಾನಾ ದೇಶದ ಅಧ್ಯಕ್ಷ ಹಿಲಾ ಲಿಮಾನ್ ಅವರ ಸಂದರ್ಶನ ದೂರದರ್ಶನದಲ್ಲಿ ಪ್ರಸಾರವಾಗುತ್ತಿತ್ತು. ಅದನ್ನು ನಾನು ಆಸಕ್ತಿಯಿಂದ ನೋಡಲು ಎರಡು ಕಾರಣಗಳಿದ್ದವು. ಅಂತಾರಾಷ್ಟ್ರೀಯ ವಿಷಯಗಳ ಕುರಿತಾದ ನನ್ನ ಅದಮ್ಯ ಕುತೂಹಲ ಮೊದಲನೆಯದಾದರೆೆ, ನನ್ನ ಅಂಚೆಚೀಟಿ ಸಂಗ್ರಹದಲ್ಲಿ ಬೊಲಿವಿಯಾವನ್ನು ಹೊರತá-ಪಡಿಸಿದರೆ ವಸಾಹತುಶಾಹಿ ಕಾಲದಲ್ಲಿ ಗೋಲ್ಡ್ ಕೋಸ್ಟ್ ಎಂದು ಕರೆಸಿಕೊಳ್ಳುತ್ತಿದ್ದು ಸ್ವಾತಂತ್ರ್ಯನಂತರ ಘಾನಾ ಎಂಬ ಪುಟ್ಟ ಹೆಸರಿನಲ್ಲಿ ಜಗತ್ತಿಗೆ ಗುರುತಾಗಿದ್ದ ಪಶ್ಚಿಮ ಆಫ್ರಿಕಾದ ಆ ಪುಟ್ಟ ದೇಶದ ಅಂಚೆಚೀಟಿಗಳು ಅತ್ಯಂತ ವರ್ಣರಂಜಿತವಾಗಿದ್ದದ್ದು ಎರಡನೆಯ ಕಾರಣವಾಗಿತ್ತು. ಅಧ್ಯಕ್ಷ ಲಿಮಾನ್ ಹೇಳುತ್ತಿದ್ದ ವಿವಿಧ ವಿಷಯಗಳು ನನ್ನ ಆಸಕ್ತಿಯನ್ನು ಸೆಳೆಯುತ್ತಾ ಹೋದರೆ ನಮ್ಮ ಪ್ರಧಾನಮಂತ್ರಿಗಳ ಹೆಸರನ್ನು ಅವರು ಇಂದಿರಾ ಗಂಧೀ ಎಂದು ಉಚ್ಚರಿಸುತ್ತಿದ್ದುದು ಬೇಸರ ಉಂಟುಮಾಡಿತು.
ಕೆಲವು ವಾರಗಳ ನಂತರ ಕಡು ಛಳಿಯ ರಾತ್ರಿಯಲ್ಲಿ ನನಗೊಂದು ಕನಸು. ಅಧ್ಯಕ್ಷ ಹಿಲಾ ಲಿಮಾನ್ ನಮ್ಮ ಮನೆಗೆ ಬಂದಿದ್ದರು, ನನ್ನೆದುರು ಕೂತು ಕನ್ನಡದಲ್ಲಿ ಮಾತಾಡುತ್ತಿದ್ದರು! ನಿಮ್ಮ ದೇಶದಲ್ಲಿ ಕ್ರಾಂತಿ ಆಗುತ್ತಿದೆಯಲ್ಲ! ಎಂದು ನಾನವರನ್ನು ಕೇಳಿದೆ. ಅವರು ಅಂಥದೇನೂ ಇಲ್ಲಾ. ಒಂದು ನಾಕು ಜನ ಪುಟಗೋಸಿಗಳು ಏನೋ ಮಾಡ್ತಿದಾರೆ. ಅದರಿಂದೇನೂ ಆಗೋದಿಲ್ಲ ಎನ್ನುತ್ತಾ ಶರೀರವನ್ನೆಲ್ಲಾ ಅಲುಗಾಡಿಸಿಕೊಂಡು ನಕ್ಕರು. ಮಾರನೆಯ ಸಂಜೆ ದೂರದರ್ಶನ ವಾರ್ತೆ ಅಧ್ಯಕ್ಷ ಲಿಮಾನ್ ಸೇನಾ ಕ್ರಿಪ್ರ ಕ್ರಾಂತಿಯಲ್ಲಿ ಪದಚ್ಯುತರಾಗಿದ್ದಾರೆ ಎಂದು ಬಿತ್ತರಿಸಿತು! ಮುಂದಿನ ಬೆಳಗು ಇಂಡಿಯನ್ ಎಕ್ಸ್ ಪ್ರೆಸ್ ಈ ಕುರಿತಾಗಿ ವಿವರಗಳನ್ನು ಹೇಳಿತು. ಅ A Madmans Diary ಎಂಬ ಶೀರ್ಷಿಕೆಯಲ್ಲಿ ಆ ದಿನಗಳಲ್ಲಿ ನಾನು ಬರೆಯುತ್ತಿದ್ದ ದಿನಚರಿ ಈಗ ನಾಲ್ಕು ಕಡೆ ಚದುರಿಹೋಗಿರುವ ನನ್ನ ಹಳೆಯ ಬರಹಗಳು ಮತ್ತು ಪುಸ್ತಕ ಸಂಗ್ರಹದಲ್ಲಿ ಒಂದೆಡೆ ಈಗಲೂ ಇದೆ. ಅದು ಸಿಕ್ಕಿದರೆ ಈ ಕನಸು ಮತ್ತು ವಾಸ್ತವದ ಪೂರ್ಣ ವಿವರಗಳನ್ನು ಹಾಗೂ ಅಂದು ನನಗಾದ ಗೊಂದಲವನ್ನು ನಿಮ್ಮೊಂದಿಗೆ ಇನ್ನೂ ಸ್ಪಷ್ಟವಾಗಿ ಹಂಚಿಕೊಳ್ಳಲು ನನಗೆ ಸಾಧ್ಯವಾಗುತ್ತದೆ.
ಈಗ ಕನಸನ್ನು ಪಕ್ಕಕಿರಿಸಿ ವಾಸ್ತವವನ್ನಷ್ಟೇ ನೋಡೋಣ. ಹಿಲಾ ಲಿಮಾನ್ರನ್ನು ಪದಚ್ಯುತಗೊಳಿಸಿದಂತಹ ಸೇನಾ ಕ್ಷಿಪ್ರ ಕ್ರಾಂತಿಗಳು ಅದಕ್ಕೆ ಹಿಂದೆಯೂ ಘಟಿಸಿವೆ, ನಂತರವೂ ಘಟಿಸುತ್ತಲೇ ಇವೆ. ಒಂದು ಅಂಕಿ ಅಂಶದ ಪ್ರಕಾರ ಕಳೆದ ಏಳು ದಶಕಗಳಲ್ಲಿ ಜಗತ್ತಿನ ವಿವಿಧೆಡೆ ಅಂತಹ 242 ಪ್ರಕರಣಗಳು ಘಟಿಸಿವೆ ಮತ್ತು ಆಫ್ರಿಕಾ ಖಂಡವೊಂದೇ 104 ಪ್ರಕರಣಗಳನ್ನು ಕಂಡಿದೆ! ಕಳೆದೊಂದು ತಿಂಗಳಲ್ಲೇ ಅಲ್ಲಿ ಅಂತಹ ಎರಡು ಸೇನಾ ಕ್ಷಿಪ್ರಕ್ರಾಂತಿಗಳು ನಡೆದಿವೆ. ಪಶ್ಚಿಮ ಆಫ್ರಿಕಾದ ನೈಜರ್ನಲ್ಲಿ ಮತ್ತು ಮಧ್ಯ ಆಫ್ರಿಕಾದ ಗ್ಯಾಬೋನ್ನಲ್ಲಿ ಅಧ್ಯಕ್ಷರ ವಿಶೇಷ ಸುರಕ್ಷಾ ಪಡೆಗಳೇ ರಹಸ್ಯ ಕಾರ್ಯವ್ಯೂಹ ರಚಿಸಿ, ಮಿಂಚಿನ ವೇಗದಲ್ಲಿ ಚುನಾಯಿತ ಅಧ್ಯಕ್ಷರನ್ನು ಸತ್ತೆಯಿಂದ ಕೆಳಗಿಳಿಸಿ ಗೃಹಬಂಧನದಲ್ಲಿರಿಸಿ, ತಾವು ಅಧಿಕಾರ ಹಿಡಿದಿವೆ. ಕಳೆದ ಏಳು ತಿಂಗಳಲ್ಲಿ ಒಟ್ಟಾರೆ ನಾಲ್ಕು ಆಫ್ರಿಕನ್ ದೇಶಗಳಲ್ಲಿ ಈ ಬಗೆಯ ಅಸಹಜ ಸತ್ತೆ ಬದಲಾವಣೆ ಆಗಿದೆ. ಈ ಹಿನ್ನೆಲೆಯಲ್ಲಿ ಸೇನಾ ಕ್ಷಿಪ್ರಕ್ರಾಂತಿಗಳು ಜಗದಗಲದಲ್ಲಿ ಏಕೆ ಮತ್ತು ಹೇಗೆ ಆಗುತ್ತವೆ, ಆಮೇಲೇನಾಗುತ್ತದೆ ಎಂದಿಲ್ಲಿ ಅವಲೋಕಿಸೋಣ. ಅದಕ್ಕಾಗಿ ದ್ವಿತೀಯ ಜಾಗತಿಕ ಸಮರಾನಂತರ ಜಗತ್ತು ಕಂಡಿರುವ 250ರಷ್ಟು ಕ್ಷಿಪ್ರಕ್ರಾಂತಿಗಳನ್ನೂ ನಾವು ವಿವರವಾಗಿ ನೋಡುವ ಅಗತ್ಯವಿಲ್ಲ. ಅದಿಲ್ಲಿ ಸಾಧ್ಯವೂ ಇಲ್ಲ. ಅನ್ನ ಬೆಂದಿದೆಯೇ ಎಂದು ನೋಡಲು ಒಂದೆರಡು ಅಗುಳು ಹಿಚುಕಿದರೆ ಸಾಕು ಎಂಬ ಹಿರಿಯರ ಮಾತನ್ನು ನಾವು ಇಲ್ಲಿಯೂ ಅನುಸರಿಸಿದರೆ ಸಾಕು.
ಇಲ್ಲಿ ಕ್ರಾಂತಿ ಮತ್ತು ಕ್ಷಿಪ್ರಕ್ರಾಂತಿಯ ನಡುವಿನ ವ್ಯತ್ಯಾಸಗಳನ್ನು ತಿಳಿದುಕೊಳ್ಳುವುದು ಅವಶ್ಯಕ. ಕ್ರಾಂತಿ ಎಲ್ಲ ಬಗೆಯಲ್ಲೂ ವ್ಯಾಪಕವಾದುದು. ಅದನ್ನು ಹೊಸ ವಿಚಾರಗಳು, ಹೊಸ ಸಿದ್ದಾಂತಗಳೂ, ಹೊಸ ಆಶೋತ್ತರಗಳು ಪ್ರೇರೇಪಿಸುತ್ತವೆ; ಹಲವು ತಿಂಗಳುಗಳ, ಕೆಲವೊಮ್ಮೆ ವರ್ಷಗಳ ಬಹಿರಂಗ ತಯಾರಿಯೊಂದಿಗೆ ಭುಗಿಲೇಳುವ ಕ್ರಾಂತಿ ದೇಶವ್ಯಾಪಿಯಾಗಿರುತ್ತದೆ ಮತ್ತು ಅದರಲ್ಲಿ ದೇಶದ ಬಹಳಷ್ಟು ನಾಗರಿಕರು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಭಾಗಿಯಾಗಿರುತ್ತಾರೆ. ಕ್ರಾಂತಿಯ ಪರಿಣಾಮವಾಗಿ ವ್ಯವಸ್ಥೆ ಪೂರ್ಣವಾಗಿ ಬದಲಾಗುತ್ತದೆ. ಆದರೆ ಕ್ಷಿಪ್ರಕ್ರಾಂತಿ ಹೀಗಲ್ಲ. ಇದರಲ್ಲಿ ಕೆಲವೇ ಜನ ಭಾಗಿಯಾಗಿರುತ್ತಾರೆ, ತಯಾರಿ ಕೆಲವು ದಿನಗಳು ಅಥವಾ ಕೆಲವೇ ತಾಸುಗಳಷ್ಟು ಕಡಿಮೆ ಆವಧಿಯಲ್ಲಿ ಅತ್ಯಂತ ರಹಸ್ಯವಾಗಿ ನಡೆಯುತ್ತದೆ ಮತ್ತು ಕಾರ್ಯಾಚರಣೆ ರಾಜಧಾನಿಯ ಪವರ್ ಕಾರಿಡಾರ್ನಲ್ಲಷ್ಟೇ ಮಿಂಚಿನ ವೇಗದಲ್ಲಿ ನಡೆದುಹೋಗುತ್ತದೆ. ಕ್ಷಿಪ್ರಕ್ರಾಂತಿಯಿಂದ ವ್ಯವಸ್ಥೆಯೇನೂ ಬದಲಾಗುವುದಿಲ್ಲ. ರಾಷ್ಟ್ರದ ಆಡಳಿತ ಚುಕ್ಕಾಣಿ ಮಾತ್ರ ಹೊಸಬರ ಕೈಗೆ ಬರುತ್ತದೆ ಮತ್ತು ಉಳಿದೆಲ್ಲವೂ ಬಹುಪಾಲು ಹಿಂದಿನಂತೇ ನಡೆಯುತ್ತಿರುತ್ತದೆ. ಸಂವಿಧಾನ ಬದಲಾವಣೆಯಾದರೂ ಹೊಸ ಆಡಳಿತಗಾರರಿಗೆ ಹೆಚ್ಚಿನ ಅಧಿಕಾರ ನೀಡುವುದರ ಹೊರತಾಗಿ ಇನ್ನಾವ ಬದಲಾವಣೆಯೂ ಅದರಲ್ಲಿರುವುದಿಲ್ಲ. ನಾಗರಿಕರ ಪಾತ್ರವಂತೂ ಇದರಲ್ಲಿ ಇರುವುದೇ ಇಲ್ಲ. ಅವರು ರಾತ್ರಿ ಹಾಸಿಗೆ ಸೇರಿ ಕಣ್ಣು ಮುಚ್ಚಿ ಬೆಳಿಗ್ಗೆ ಎದ್ದು ಕಣ್ಣು ಹೊಸಕಿಕೊಳ್ಳುವುದರೊಳಗೆ ಕ್ಷಿಪ್ರಕ್ರಾಂತಿಯಾಗಿಹೋಗಿರುತ್ತದೆ. ಎಲ್ಲವೂ ಸಾಮಾನ್ಯ ಎಂದವರಿಗೆ ಹೇಳಲಾಗುತ್ತದೆ ಮತ್ತವರು ಅದರಂತೆ ಅವರು ದಿನಗಳೆಯುತ್ತಾರೆ ಸಹ.
ಬಹುತೇಕ ಸಂದರ್ಭಗಳಲ್ಲಿ ಕ್ಷಿಪ್ರಕ್ರಾಂತಿಗಳನ್ನು ಎಸಗುವವರು ಸೇನಾಧಿಕಾರಿಗಳು, ಅರಸ ಅಥವಾ ಅಧ್ಯಕ್ಷರ ಹತ್ತಿರದ ಸಂಬಂಧಿಗಳಾಗಿದ್ದುಕೊಂಡು ಆ ಮೂಲಕ ಆಡಳಿತ ಸೂತ್ರಗಳ ನೇರ ಪರಿಚಯ ಇಟ್ಟುಕೊಂಡು ಹಿರಿಯ ಸೇನಾಧಿಕಾರಿಗಳ ಜತೆಗೂ ಉತ್ತಮ ಸಂಬಂಧ ಹೊಂದಿರುವವರೂ ಕ್ಷಿಪ್ರಕ್ರಾಂತಿ ಎಸಗಿ ಅಧಿಕಾರ ಹಿಡಿದ ಉದಾಹರಣೆಗಳೂ ಅಲ್ಲಲ್ಲಿ ಸಿಗುತ್ತವೆ. ಕ್ಷಿಪ್ರಕ್ರಾಂತಿ ಎಸಗುವವರ ಮುಖ್ಯ ಉದ್ದೇಶ ಅಧಿಕಾರ ಲಪಟಾಯಿಸುವುದಷ್ಟೇ. ಆದರೆ ಅದಕ್ಕೆ ಅವರು ನೀಡುವ ಕಾರಣ ದೇಶ ದುರಂತದತ್ತ ಸಾಗುತ್ತಿದೆ, ಅದನ್ನು ತಡೆಯಬೇಕಾದ್ದು ತಮ್ಮ ಕರ್ತವ್ಯ, ನಾವದನ್ನು ನಿರ್ವಹಿಸಲು ಹೊರಟಿದ್ದೇವೆ ಎಂಬ ಸಬೂಬುಗಳು. ಆದರೆ ಈ ಸಬೂಬುಗಳು ನಿಜವಾದುವುಗಳು ಎಂಬಂತಹ ಸ್ಥಿತಿ ದೇಶದಲ್ಲಿ ನಿರ್ವಣವಾಗಿರಬೇಕಾದ್ದು ಮಾತ್ರ ಅಗತ್ಯ. ಸಂವಿಧಾನಾತ್ಮಕವಾಗಿ ಚುನಾವಣೆಗಳ ಮೂಲಕ ಬೇಜವಾಬ್ದಾರ ಸರ್ಕಾರನ್ನು ತೊಲಗಿಸಿ ಜನಪರ ಸರ್ಕಾರವನ್ನು ತರುವ ಅವಕಾಶವಿದ್ದರೂ ಅದು ಸದ್ಯದ ಪರಿಸ್ಥಿತಿಯಲ್ಲಿ ಸಾಧ್ಯವಿಲ್ಲದ್ದು ಮತ್ತು ಸಮಯ ಹಿಡಿಯುವಂತದ್ದು ಎಂದು ಹೇಳಿ ತಮ್ಮ ಉದ್ದೇಶ ರಾಜಕೀಯ ಗೊಂದಲವನ್ನು, ಆರ್ಥಿಕ ದುಃಸ್ಥಿತಿಯನ್ನು ಒಂದು ಹಂತಕ್ಕೆ ಸರಿಪಡಿಸಿ ಸಂವಿಧಾನಾತ್ಮಕ ಸರ್ಕಾರ ಬದಲಾವಣೆಗೆ ಅಗತ್ಯವಾದ ಸ್ಥಿತಿಯನ್ನು ಸೃಷ್ಟಿಸುವುದು ಎಂದು ಕ್ಷಿಪ್ರಕ್ರಾಂತಿಯ ರೂವಾರಿಗಳು ಒಳಹೊರಗಿನ ಜನರನ್ನು ನಂಬಿಸಲು ಪ್ರಯತ್ನಿಸಿ ಅದರಲ್ಲಿ ಯಶಸ್ವಿ ಯಾಗಿರುವುದು ನಮ್ಮ ನೆರೆಯಲ್ಲೇ ಒಂದಕ್ಕಿಂತ ಹೆಚ್ಚು ಬಾರಿ ಘಟಿಸಿದೆ. ಆದಷ್ಟು ಬೇಗ ಚುನಾವಣೆಗಳನ್ನು ನಡೆಸಿ ನಾಗರಿಕ ಸರ್ಕಾರದ ಕೈಗೆ ಅಧಿಕಾರವನ್ನು ವರ್ಗಾಯಿಸುವ ವಾಗ್ದಾನವೊಂದರ ಹೊರತಾಗಿ ಉಳಿದೆಲ್ಲವನ್ನೂ ಕ್ಷಿಪ್ರಕ್ರಾಂತಿಯ ರೂವಾರಿಗಳು ನರೆವೇರಿಸಿದ್ದೂ ನಮ್ಮ ನೆರೆಯಲ್ಲೇ ನಡೆದಿದೆ.
ಪಾಕಿಸ್ತಾನ ಸೃಷ್ಟಿಯಾಗಿ ಹನ್ನೊಂದು ವರ್ಷಗಳು ಗತಿಸಿದರೂ ಅಲ್ಲಿ ಚುನಾವಣೆಗಳು ನಡೆದಿರಲಿಲ್ಲ. ಅಷ್ಟು ವರ್ಷಗಳಲ್ಲಿ ಅಧಿಕಾರ ಹಿಡಿದ ಮೂವರು ಗವರ್ನರ್ ಜನರಲ್ಗಳು, ಒಬ್ಬರು ಅಧ್ಯಕ್ಷರು, ಏಳು ಪ್ರಧಾನಮಂತ್ರಿಗಳು ಜನರಿಂದ ಆಯ್ಕೆಯಾಗಿರಲೇ ಇಲ್ಲ. ಮುಸ್ಲಿಂ ಲೀಗ್ನ ಪ್ರಭಾವಿ ನೇತಾರರಾಗಿದ್ದಷ್ಟೇ ಅವರ ಯೋಗ್ಯತೆಯಾಗಿತ್ತು. ಅವರಲ್ಲೂ ಪರಸ್ಪರ ದ್ವೇಷ, ಸ್ಪರ್ಧೆ ತಾರಕಕ್ಕೇರಿ ಎರಡು ವರ್ಷಗಳಲ್ಲಿ ನಾಲ್ವರು ಪ್ರಧಾನಮಂತ್ರಿಗಳನ್ನು ಪಾಕಿಸ್ತಾನ ಕಂಡಿತ್ತು. ಅಧಿಕಾರಲಾಲಸಿ ಲೀಗಿಗಳ ಈ ದುರ್ವ್ಯವಹಾರಗಳಿಂದಾಗಿ ದೇಶದ ಆರ್ಥಿಕ ಸ್ಥಿತಿಯೂ ಹದಗೆಟ್ಟಿತ್ತು. ಕ್ಷಿಪ್ರಕ್ರಾಂತಿಯೆಸಗಲು 1958ರಲ್ಲಿ ಫೀಲ್ಡ್ ಮಾರ್ಷಲ್ ಅಯೂಬ್ ಖಾನ್ರನ್ನು ಪ್ರೇರೇಪಿಸಿದ್ದು ಮತ್ತು ತಮ್ಮ ಕೃತ್ಯವನ್ನು ಯಶಸ್ವಿಯಾಗಿ ಸಮರ್ಥಿಸಿಕೊಳ್ಳಲು ಅವರಿಗೆ ಅನುಕೂಲ ಒದಗಿಸಿದ್ದು ಮುಖ್ಯವಾಗಿ ಈ ಅಂಶಗಳೇ. ನಂತರದ ಅರ್ಧ ದಶಕಗಳಲ್ಲಿ ಅವರು ದೇಶವನ್ನು ಆರ್ಥಿಕ ಸಂಕಟದಿಂದ ಪಾರುಮಾಡಿ , 5.2% ವಾರ್ಷಿಕ ಅಭಿವೃದ್ಧಿ ದರದೊಂದಿಗೆ ಏಶಿಯಾದಲ್ಲಿ ಅತ್ಯಂತ ವೇಗವಾಗಿ ಮುಂದುವರೆಯುತ್ತಿರ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಪಾಕಿಸ್ತಾನ ಪಾತ್ರವಾಗುವಂತೆ ಮಾಡಿದರು. ಇದರೊಂದಿಗೆ ನಯೀ ಕಿರಣ್ ಎಂಬ ವೈವಿಧ್ಯಮಯ ಪ್ರಗತಿಪರ ಯೋಜನೆಗಳ ಮೂಲಕ ಪಾಕಿಸ್ತಾನವನ್ನು ಅಭಿವೃದ್ಧಿಶೀಲ ಜಗತ್ತಿನ ಮಾದರಿ ರಾಷ್ಟ್ರಗಳಲ್ಲೊಂದಾಗುವಂತೆ ಮಾಡಿದರು. ಮೊದಲಿಗೆ ಅಮೆರಿಕಾ, ನಂತರ ಚೀನಾದ ಜತೆ ಘನಿಷ್ಟ ಸಂಬಂಧಗಳನ್ನು ಬೆಳೆಸಿ ಭಾರತಕ್ಕೆ ವಿರುದ್ಧವಾಗಿ ಪಾಕಿಸ್ತಾನವನ್ನು ಶಕ್ತಿಶಾಲಿ ರಾಷ್ಟ್ರವನ್ನಾಗಿಸಿದರು. ಆದರೆ ಮಾತುಕೊಟ್ಟಂತೆ ಚುನಾವಣೆ
ಗಳನ್ನೇನೂ ನಡೆಸದೇ ತಮ್ನನ್ನು ಚೀಫ್ ಮಾರ್ಷಲ್ ಲಾ ಅಡ್ಮಿನಿಸ್ಟ್ರೇಟರ್ (ಸಿಎಂಎಲ್ಎ) ಎಂದು ಕರೆದುಕೊಂಡು, ಎಲ್ಲ ರಾಜಕೀಯ ಅಧಿಕಾರವನ್ನೂ ತಮ್ಮ ಕೈಯಲ್ಲಿ ಕೇಂದ್ರೀಕರಿಸಿಕೊಂಡು ಏಳು ವರ್ಷಗಳನ್ನು ಕಳೆದುಬಿಟ್ಟರು 1965ರಲ್ಲಿ ಕೊನೆಗೂ ಚುನಾವಣೆಗಳನ್ನು ನಡೆಸಬೇಕಾದ ಒತ್ತಡಕ್ಕೊಳಗಾದಾಗ ಸೇನಾ ಸಮವಸ್ತ್ರ ಕಿತ್ತೊಗೆದು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದರು. ಅದಾಗಲೇ ಸೇನಾ ಸರ್ವಾಧಿಕಾರಿಯಾಗಿದ್ದ ಅವರಿಗೆ ಚುನಾವಣೆಗಳನ್ನು ಮೋಸದಿಂದ ಗೆಲ್ಲುವುದೇನೂ ಕಷ್ಟವಾಗಿರಲಿಲ್ಲ. ಆದರೂ ತಮ್ಮ ಪ್ರತಿಸ್ಪರ್ಧಿಯಾದ ರಾಷ್ಟ್ರಪಿತ ಮಹಮದ್ ಆಲಿ ಜಿನ್ನಾರ ತಂಗಿ ಫಾತಿಮ ಜಿನ್ನಾರ ಜನಪ್ರಿಯತೆಯನ್ನು ಕುಗ್ಗಿಸಲು ಆಕೆ ತನ್ನ ವಿಧುರ ಸಹೋದರನ ಜತೆಗೇ ಲೈಂಗಿಕ ಸಂಪರ್ಕ ಹೊಂದಿದ್ದರು ಎಂದು ಸಾರ್ವಜನಿಕವಾಗಿ ಹೇಳುವಷ್ಟು ಕೆಳಮಟ್ಟಕ್ಕಿಳಿದರು.
1977ರಲ್ಲಿ ಕ್ಷಿಪ್ರಕ್ರಾಂತಿ ಎಸಗಿದ ಜಿಯಾ-ಉಲ್-ಹಕ್ ಹಿಂದಿನ ಅಯೂಬ್ ಖಾನ್ರ ಮಾದರಿಯನ್ನೇ ಅನುಸರಿಸಿ ತಮ್ಮನ್ನು ಸಿಎಂಎಲ್ಎ ಎಂದೇ ಕರೆದುಕೊಂಡು ಚುನಾವಣಾ ವಾಗ್ದಾನವನ್ನು ಮೂರುಮೂರು ತಿಂಗಳಿಗೂ ವಿಸ್ತರಿಸುತ್ತಾ ಹೋದರು. ಅದನ್ನು ಕಾದಂಬರಿಕಾರ ಸಲ್ಮಾನ್ ರಶ್ದೀ ತಮ್ಮ ಶೇಮ್ ಕಾದಂಬರಿಯಲ್ಲಿ ಲೇವಡಿ ಮಾಡಿದ್ದು ಹೀಗೆ- ಸಿಎಂಎಲ್ಎ ಅಂದರೆ ಚೀಫ್ ಮಾರ್ಷಲ್ ಲಾ ಅಡ್ಮಿನಿಸ್ಟ್ರೇಟರ್ ಅಂತ ಅಲ್ಲ. ಕ್ಯಾನ್ಸಲ್ ಮೈ ಲಾಸ್ಟ್ ಅನೌನ್ ್ಸ ಮೆಂಟ್ ಅಂತ. ಇತ್ತ ಬಂಗ್ಲಾದೇಶದಲ್ಲೂ 1977ರಲ್ಲಿ ಕ್ಷಿಪ್ರಕ್ರಾಂತಿಯ ಮೂಲಕ ಅಧಿಕಾರಕ್ಕೆ ಬಂದ ಜನರಲ್ ಜಿಯಾ-ಉರ್-ರೆಹಮಾನ್ ರಾಜಕೀಯ ಸ್ಥಿರತೆ ಸಾಧಿಸಿ ತಕ್ಕಮಟ್ಟಿಗೆ ಆರ್ಥಿಕ ಪ್ರಗತಿಗೂ ಕಾರಣವಾದರು. ಇದನ್ನೇ 1952ರಲ್ಲಿ ಈಜಿಪ್ಟ್ನಲ್ಲಿ ಅಧಿಕಾರಕ್ಕೆ ಬಂದ ಗೆಮಾಲ್ ಅಬ್ದೆಲ್ ನಾಸೆರ್ ದೊಡ್ಡದಾಗಿ ಮಾಡಿ ದೇಶದ ಕಲ್ಯಾಣ ಸಾಧಿಸಿ ಆ ಪುರಾತನ ನಾಡಿನ ಆಧುನಿಕ ಭಾಗ್ಯವಿದಾತರಾದರು. ಕ್ಷಿಪ್ರಕ್ರಾಂತಿಯ ನಂತರ ದೇಶ ಬಾಣಲೆಯಿಂದ ಬೆಂಕಿಗೆ ಬಿದ್ದ ಉದಾಹರಣೆಗಳು ಅನೇಕವಿವೆ. ಉಗಾಂಡಾದ ಗೌರವಾನ್ವಿತ ಅಧ್ಯಕ್ಷ ಮಿಲ್ಟನ್ ಒಬೋಟೆ ಅವರನ್ನು 1971ರಲ್ಲಿ ಉರುಳಿಸಿದ ಇದೀ ಅಮೀನ್ ನರರಕ್ಕಸನಾಗಿದ್ದ. ಮದುವೆಯೊಂದಕ್ಕೆ ಅತಿಥಿಯಾಗಿ ಹೋದವನು ವಧುವನ್ನೇ ಕೈವಶ ಮಾಡಿಕೊಂಡು ಅವಳೊಂದಿಗೆ ಅನಾಗರಿಕವಾಗಿ ವರ್ತಿಸಿದ್ದಲ್ಲದೇ ಅವಳನ್ನು ಕೊಂದು, ಸ್ತನಗಳನ್ನು ಕತ್ತರಿಸಿ ಬೇಯಿಸಿ ತಿಂದದ್ದು ಅವನ ಹಲವು ಕ್ರೌರ್ಯಗಳಲ್ಲೊಂದು. ಉಗಾಂಡಾವನ್ನು ಈ ಪಿಶಾಚಿಯಿಂದ ಕೊನೆಗೂ 1979ರಲ್ಲಿ ಕಾಪಾಡಿದ್ದು ನೆರೆಯ ತಾಂಜಾನಿಯಾ. ಸರಿಸುಮಾರು ಅವನಂತೆಯೇ ಇದ್ದ ಜೀನ್ ಬೇದಲ್ ಬೊಕಾಸಾ 1966ರಲ್ಲಿ ಡೇವಿಡ್ ದಾಕೋನನ್ನು ಎತ್ತಂಗಡಿ ಮಾಡಿ ಮಧ್ಯ ಆಫ್ರಿಕಾ ಗಣರಾಜ್ಯದ ಸರ್ವಾಧಿಕಾರಿಯಾದ. ಅವನ ಕಪಿಮುಷ್ಟಿಯಿಂದ ಆ ದೇಶವನ್ನು 1979ರಲ್ಲಿ ಹೊರತಂದದ್ದು ಫ್ರಾನ್ಸ್.
ಶೀತಲ ಸಮರ ಕಾಲದಲ್ಲಿ ಅಮೆರಿಕದ ಸಿಐಎ ಹಲವಾರು ದೇಶಗಳಲ್ಲಿ ಸೇನಾ ಕ್ಷಿಪ್ರಕ್ರಾಂತಿಯ ಹೂಟ ಹೂಡಿ ವಾಷಿಂಗ್ಟನ್ನ ಕೈಗೊಂಬೆ ಸೇನಾ ಸರ್ವಾಧಿಕಾರಿಗಳನ್ನು ಸೃಷ್ಟಿಸಿದ್ದುಂಟು. 1973ರಲ್ಲಿ ಚಿಲಿಯ ಎಡಪಂಥೀಯ ಅಧ್ಯಕ್ಷ ಲಾಲ್ವದೋರ್ ಅಲೆಂದೆಯವರನ್ನು ಕೊನೆಗಾಣಿಸಿ ಸರ್ವಾಧಿಕಾರಿ ಅಗಸ್ತೋ ಪಿನೋಷಯನ್ನು 17 ವರ್ಷ ಅಧಿಕಾರದಲ್ಲಿರಿಸಿದ್ದೇ ಸಿಐಎ. ತಾನೇನು ಕಡಿಮೆ ಎಂದು ಮಾಸ್ಕೋ ಸಹ 1974ರಲ್ಲಿ ಇಥಿಯೋಪಿಯಾದ ಅರಸ ಹೈಲೆ ಸೆಲಾಸಿಯವನ್ನು ಸೇನಾ ಕ್ಷಿಪ್ರಕ್ರಾಂತಿಯ ಮೂಲಕ ಸಿಂಹಾಸನದಿಂದ ಉರುಳಿಸಿ ಮೆಂಗಿಷ್ಟು ಹೈಲೆ ಮರಿಯಂರನ್ನು ತನ್ನ ಪರವಾದ ಸರ್ವಾಧಿಕಾರಿಯಾಗಿ ಕೂರಿಸಿತು. 1969ರಲ್ಲಿ ಅರಸ ಇದ್ರಿಸ್ರ ಸಿಂಹಾಸನವನ್ನು ಎರಡೇ ತಾಸುಗಳ ಕ್ಷಿಪ್ರಕ್ರಾಂತಿಯಲ್ಲಿ ಕಿತ್ತುಕೊಂಡು ನಲವತ್ತೆರಡು ವರ್ಷಗಳ ಕಾಲ ಅಧಿಕಾರ ನಡೆಸಿದ ಕರ್ನಲ್ ಮುವಾಮರ್ ಗಡಾಫಿಯವರದೊಂದು ಕರುಣಕಥೆ. ತನ್ನ ಜನರಿಗೆ ಎಷ್ಟೇ ಅನುಕೂಲಗಳನ್ನು ಒದಗಿಸಿದರೂ ತನ್ನ ಕೆಲವು ಕೃತ್ಯಗಳಿಂದ ಅಮೆರಿಕಾ ಮತ್ತು ಬ್ರಿಟನ್ನ ವಿರೋಧ ಕಟ್ಟಿಕೊಂಡ ಗಡಾಫಿ 2011ರಲ್ಲಿ ದಾರುಣ ಅಂತ್ಯ ಕಂಡರು.
ಇಂದು ನೈಜರ್ನಲ್ಲಿ ಜನತೆ ಹೊಸ ಸೇನಾ ಸರ್ಕಾರದ ಪರವಾಗಿ ನಿಂತಿದ್ದಾರೆ. ಗ್ಯಾಬೋನ್ನಲ್ಲೂ ಅದೇ ಕಥೆ. ಆಗಸ್ಟ್ 30ರಂದು ಮೂರನೆಯ ಬಾರಿಗೆ ಅಧ್ಯಕ್ಷರಾಗಿ ಆಯ್ಕೆಯಾದ ಎರಡು ತಾಸುಗಳಲ್ಲಿ ಗೃಹಬಂಧನಕ್ಕೊಳಗಾದ ಅಧ್ಯಕ್ಷ ಆಲಿ ಬೊಂಗೋ ನನ್ನ ಪರವಾಗಿ ಗದ್ದಲ ಮಾಡಿ ಎಂದು ಅಲವತ್ತುಕೊಂಡದ್ದು ಪ್ರಯೋಜನವಾಗಿಲ್ಲ. ಜನತೆ ಡೋಲು ಬಾರಿಸಿ, ತುತ್ತೂರಿ ಊದಿ ಹೊಸ ಸೇನಾ ಸರ್ಕಾರದ ಪರವಾಗಿ ಗದ್ದಲ ಮಾಡುತ್ತಿದ್ದಾರೆ. ಬೊಂಗೋರ ಭಂಗ ಸದ್ಯಕ್ಕೆ ಕೊನೆಯಾಗುವಂತೆ ಕಾಣುತ್ತಿಲ್ಲ.
(ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)
ಮಗು ಅಳುತ್ತಿದೆ ಅಂತ ಮೂಗು-ಬಾಯಿ ಒತ್ತಿ ಹಿಡಿದ ಅಪ್ಪ; ಉಸಿರುಗಟ್ಟಿ ಸಾವಿಗೀಡಾದ 14 ತಿಂಗಳ ಮಗ