ಮನುಷ್ಯನಿಗೆ ಸಂಸ್ಕಾರ ಅಗತ್ಯ

Sdm
ಅಳೇಹಳ್ಳಿಯಲ್ಲಿ ಆಯೋಜಿಸಿದ್ದ ಸಾಮೂಹಿಕ ಸತ್ಯನಾರಾಯಣ ಪೂಜೆ, ಸಾಧನಾ ಸಮಾವೇಶವನ್ನು ಶ್ರೀ ಲಕ್ಷ್ಮಿಸೇನ ಭಟ್ಟಾರಕ ಸ್ವಾಮೀಜಿ ಉದ್ಘಾಟಿಸಿದರು. ರತ್ನಮ್ಮ, ಪ್ರಕಾಶ್ ರಾವ್, ಎಂ.ಆರ್.ನಿರಂಜನ್, ತಿಮ್ಮೇಗೌಡ ಇತರರಿದ್ದರು.
Published on

ಎನ್.ಆರ್.ಪುರ: ಸಮಾಜದಲ್ಲಿ ನಿರೀಕ್ಷೆಯಂತೆ ಜನರು ಧರ್ಮ ಪಾಲಿಸುತ್ತಿಲ್ಲ. ಹಾಗಾಗಿ ಪ್ರತಿಯೊಬ್ಬರಿಗೂ ಧಾರ್ಮಿಕ ಸಂಸ್ಕಾರದ ಅಗತ್ಯವಿದೆ ಎಂದು ಸಿಂಹನಗದ್ದೆ ಬಸ್ತಿಮಠದ ಶ್ರೀ ಲಕ್ಷ್ಮಿಸೇನ ಭಟ್ಟಾರಕ ಸ್ವಾಮೀಜಿ ತಿಳಿಸಿದರು.

ಅಳೇಹಳ್ಳಿ ಶ್ರೀ ರಂಗನಾಥ ಸ್ವಾಮಿ ದೇವಸ್ಥಾನದಲ್ಲಿ ಸೋಮವಾರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೈಮರ ವಲಯದ ಅಳೇಹಳ್ಳಿ ಪ್ರಗತಿ ಬಂಧು- ಸ್ವಸಹಾಯ ಸಂಘಗಳ ಒಕ್ಕೂಟ ಹಾಗೂ ರಂಗನಾಥಸ್ವಾಮಿ ದೇವಸ್ಥಾನ ಸಮಿತಿ ಆಶ್ರಯದಲ್ಲಿ ಆಯೋಜಿಸಿದ್ದ ಸಾಮೂಹಿಕ ಸತ್ಯನಾರಾಯಣ ಪೂಜೆ ಹಾಗೂ ಸಾಧನಾ ಸಮಾವೇಶದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಕಷ್ಟದಲ್ಲಿರುವುವರಿಗೆ ಉಪಕಾರ ಮಾಡುವುದೇ ನಿಜವಾದ ಧರ್ಮ. ಸಮಾಜದಲ್ಲಿ ಕೆಟ್ಟ ಕೆಲಸ ಮಾಡುವ ರಾವಣರು ಇನ್ನೂ ಇದ್ದಾರೆ. ಪ್ರತಿಯೊಬ್ಬ ಮನುಷ್ಯನಲ್ಲಿ ಅಡಗಿರುವ ಕಾಮ, ಕ್ರೋಧ, ಮದ, ಮತ್ಸರಗಳನ್ನು ತೆಗೆದು ಹಾಕುವುದೇ ಸಂಸ್ಕಾರ. ಧರ್ಮಸ್ಥಳ ಯೋಜನೆಯಿಂದ ಗ್ರಾಮೀಣ ಪ್ರದೇಶಗಳಲ್ಲಿ ದೊಡ್ಡ ಕ್ರಾಂತಿಯೇ ಆಗಿದೆ. ವಿಶೇಷವಾಗಿ ಮಹಿಳೆಯರಿಗೆ ಅನುಕೂಲವಾಗಿದೆ ಎಂದರು.
ಯೋಜನೆಯ ಜಿಲ್ಲಾ ನಿರ್ದೇಶಕ ಪ್ರಕಾಶ ರಾವ್ ಮಾತನಾಡಿ, ಮನುಷ್ಯರು ಧರ್ಮದ ತಳಹದಿ ಮೇಲೆ ಬದುಕಬೇಕು. ಧರ್ಮಸ್ಥಳ ಯೋಜನೆಯಿಂದ ರಾಜ್ಯದ 20 ಸಾವಿರ ಹಳ್ಳಿಗಳಲ್ಲಿ 6.50 ಲಕ್ಷ ಸ್ವಸಹಾಯ ಗುಂಪುಗಳು ಕೆಲಸ ಮಾಡುತ್ತಿವೆ. ಪ್ರತಿ ಸದಸ್ಯರು ವಾರಕ್ಕೆ 10 ರೂ. ಉಳಿತಾಯ ಮಾಡಿದ್ದು ಈಗ ಆ ಹಣ 3 ಸಾವಿರ ಕೋಟಿ ರೂ. ಆಗಿದೆ. ಯೋಜನೆಯ ಸ್ವಸಹಾಯ ಸಂಘಗಳಿಗೆ 1 ಲಕ್ಷ ಕೋಟಿ ರೂ. ಬ್ಯಾಂಕ್ ಸಾಲ ನೀಡಿದೆ ಎಂದು ಮಾಹಿತಿ ನೀಡಿದರು.
ಸ್ವಸ್ಥ ಸಮಾಜ ನಿರ್ಮಾಣ ಧರ್ಮಸ್ಥಳ ಯೋಜನೆ ಗುರಿ. ಪ್ರಸ್ತುತ ಹೊಸ ಹೊಸ ರೋಗಗಳು ಬರುತ್ತಿವೆ. ಪ್ರತಿಯೊಬ್ಬರೂ ಶಿಸ್ತಿನ ಜೀವನ ನಡೆಸಬೇಕು. ಹಿತ, ಮಿತವಾದ ಆಹಾರ ಸೇವಿಸಬೇಕು. ಯೋಗ, ಪ್ರಾಣಾಯಾಮ ಮಾಡಬೇಕು ಎಂದು ಸಲಹೆ ನೀಡಿದರು.
ಬಾಳೆ ಗ್ರಾಪಂ ಅಧ್ಯಕ್ಷೆ ವಗಡೆ ರತ್ನಮ್ಮ, ಉಪಾಧ್ಯಕ್ಷ ಹೆನ್ನಂಗಿ ತಿಮ್ಮೇಗೌಡ, ಸದಸ್ಯೆ ಶಾಂತಮ್ಮ, ಅಳೇಹಳ್ಳಿ ರಂಗನಾಥ ಸ್ವಾಮಿ ದೇವಸ್ಥಾನ ಸಮಿತಿ ಅಧ್ಯಕ್ಷ ಮಾವಿನಮನೆ ನಾಗರಾಜ ಗೌಡ, ಅಳೇಹಳ್ಳಿ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟದ ಅಧ್ಯಕ್ಷ ಬೆಳ್ಳಂಗಿ ಮಂಜುನಾಥ್, ಕೊಪ್ಪ, ಎನ್.ಆರ್.ಪುರ ತಾಲೂಕು ಯೋಜನಾಧಿಕಾರಿ ಎಂ.ಆರ್.ನಿರಂಜನ್, ಕೈಮರ ವಲಯ ಮೇಲ್ವಿಚಾರಕ ತೀರ್ಥರಾಜ್ ಇದ್ದರು. ಸೇವಾ ನಿರತೆ ಅಶ್ವಿನಿ ವರದಿ ವಾಚಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net