

ನವದೆಹಲಿ: ಬಡತನದಿಂದಾಗಿ ತನ್ನ ಮೂರು ವರ್ಷದ ಮಗನನ್ನು ಮಾರಾಟಕ್ಕಿಟ್ಟಿದ್ದ ತಂದೆ, ಆತನನ್ನು ಖರೀದಿಸುವವರು ಸಿಗಲಿಲ್ಲವೆಂದು ನೊಂದು ಕೊಂದು ಹಾಕಿದ್ದಾನೆ. ಮೊಹಮದ್ ನೌಷಾದ್ ಎಂಬಾತ ಮಗನನ್ನು ಕೊಂದ ತಂದೆ.
ಬಡತನದಿಂದ ಬಳಲುತ್ತಿದ್ದ ಮೊಹಮದ್ ನೌಷಾದ್ ಕುಡಿತ ಹಾಗೂ ಜೂಜಿನ ಚಟ ಹೊಂದಿದ್ದ. ಅದಕ್ಕೆ ಹಣ ಹೊಂದಿಸಲಾಗದೆ ತನ್ನ ಮೂರು ವರ್ಷದ ಮಗನನ್ನು ಮೂರು ಲಕ್ಷ ರೂಪಾಯಿಗೆ ಮಾರಾಟಕ್ಕಿಟ್ಟಿದ್ದ. ಈ ಬಗ್ಗೆ ಪತ್ನಿಯ ವಿರೋಧ ಇದ್ದಿದ್ದರಿಂದ ಇಬ್ಬರ ಮಧ್ಯೆ ಆಗಾಗ ಜಗಳ ಆಗುತ್ತಿತ್ತು. ಆದರೆ ಮಂಗಳವಾರ ನೆರೆಮನೆಯಿಂದ ಮೊಬೈಲ್ ಫೋನ್ ಚಾರ್ಜರ್ ತರಲು ಹೆಂಡತಿಯನ್ನು ಕಳಿಸಿದ್ದ ನೌಷಾದ್, ಆಕೆ ಮರಳುವಷ್ಟರಲ್ಲಿ ಮಗನನ್ನು ಕೊಂದುಹಾಕಿದ್ದ.
ಉಸಿರುಗಟ್ಟಿಹೋಗಿದ್ದ ಮಗನನ್ನು ತಾಯಿ ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದರೂ ಆತನನ್ನು ಉಳಿಸಿಕೊಳ್ಳಲು ಆಗಿಲ್ಲ. ನೌಷಾದ್ನ ಈ ಕೃತ್ಯದ ಕುರಿತು ಆತನ ತಂದೆಯೇ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಬುಧವಾರ ನೌಷಾದ್ನನ್ನು ಬಂಧಿಸಿದ್ದಾರೆ. ಅಂದಹಾಗೆ ಉತ್ತರಪ್ರದೇಶದ ಅಮ್ರೋಹ ಜಿಲ್ಲೆಯ ಧನೊರಾ ಎಂಬಲ್ಲಿ ಘಟನೆ ನಡೆದಿದೆ.