

ಮುಂಬೈ: 20 ವರ್ಷದ ಯುವಕನೊಬ್ಬ 12 ವರ್ಷದ ಬಾಲಕಿಯನ್ನು ಚಾಕುವಿನಿಂದ ಇರಿದು ಕೊಂದು ತಾನೂ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಮಹಾರಾಷ್ಟ್ರದ ಕಲ್ಯಾಣ್‍ನಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆದಿತ್ಯ ಕಾಂಬ್ಳೆ ಎಂಬಾತನ ಪ್ರೇಮ ನಿವೇದನೆ ತಿರಸ್ಕರಿಸಿದ್ದಕ್ಕಾಗಿ ಆತ ಅಸಮಾಧಾನಗೊಂಡು ಬಾಲಕಿ ವಾಸಿಸುತ್ತಿದ್ದ ಕಟ್ಟಡದ ಮೆಟ್ಟಿಲುಗಳ ಮೇಲೆ ಆಕೆಯ ತಾಯಿಯ ಮುಂದೆಯೇ ಹಲ್ಲೆ ನಡೆಸಿದ್ದಾನೆ.
ಇದನ್ನೂ ಓದಿ: ಪೊಲೀಸರ ಬಂಧನಕ್ಕೆ ಹೆದರಿ ಯುವಕ ಆತ್ಮಹತ್ಯೆ
ಬಾಲಕಿ ತನ್ನ ತಾಯಿಯೊಂದಿಗೆ ಕೋಚಿಂಗ್ ತರಗತಿಯಿಂದ ಹಿಂದಿರುಗುತ್ತಿದ್ದಾಗ ಆದಿತ್ಯ, ಅವರನ್ನು ಮೆಟ್ಟಿಲುಗಳ ಬಳಿ ಅಡ್ಡಗಟ್ಟಿದ್ದ ಎಂದು ನೆರೆಹೊರೆಯವರು ತಿಳಿಸಿದ್ದಾರೆ. ತಾಯಿಯನ್ನು ಆತ ತಳ್ಳಿ ಮತ್ತು ಹುಡುಗಿಯನ್ನು ಕನಿಷ್ಠ ಎಂಟು ಬಾರಿ ಇರಿದಿದ್ದಾನೆ. ಹಠಾತ್ ದಾಳಿಯಿಂದ ಆಘಾತಕ್ಕೊಳಗಾದ ತಾಯಿ ಸಹಾಯಕ್ಕಾಗಿ ಕಿರುಚಿಕೊಂಡಳು. ಮೆಟ್ಟಿಲುಗಳ ಮೇಲೆ ಮತ್ತು ತಾಯಿ-ಮಗಳು ಹಿಂದಿರುಗುವಾಗ ಖರೀದಿಸಿದ ತರಕಾರಿಗಳ ಮೇಲೆ ರಕ್ತ ಚೆಲ್ಲಿತ್ತು. ಬಾಲಕಿ ಕುಸಿದು ಬಿದ್ದಾಗ, ಆದಿತ್ಯ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಯತ್ನದಲ್ಲಿ ಫಿನಾಯಿಲ್ ಕುಡಿದನು. ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಬಾಲಕಿಯ ತಾಯಿಯ ಕಿರುಚಾಟವನ್ನು ಕೇಳಿದ ನೆರೆಹೊರೆಯವರು 12 ವರ್ಷದ ಬಾಲಕಿಯನ್ನು ಆಸ್ಪತ್ರೆಗೆ ಕರೆದೊಯ್ದರು, ಅಲ್ಲಿ ಅವಳು ಚಿಕಿತ್ಸೆಯ ಸಮಯದಲ್ಲಿ ಸಾವನ್ನಪ್ಪಿದಳು. ಕೃತ್ಯಕ್ಕೆ ಬಳಸಿದ ಚಾಕುವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆದಿತ್ಯ ವಿರುದ್ಧ ಕೊಲೆ ಮತ್ತು ಆತ್ಮಹತ್ಯೆ ಯತ್ನದ ಆರೋಪಗಳಿವೆ ಎಂದು ಪೊಲೀಸರು ತಿಳಿಸಿದ್ದಾರೆ. (ಏಜೆನ್ಸೀಸ್)