

ಲಕ್ನೋ: ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದ್ದು, ವ್ಯಕ್ತಿಯೊಬ್ಬ ತನ್ನ ಹೆಂಡತಿ ಮತ್ತು 6 ಮತ್ತು 3 ವರ್ಷದ ಇಬ್ಬರು ಮಕ್ಕಳನ್ನು ಕೊಲೆ ಮಾಡಿ, ಅವರ ಶವದೊಂದಿಗೆ ಮೂರು ದಿನಗಳ ಕಾಲ ಮನೆಯಲ್ಲೇ ಮಲಗಿದ್ದ ಶಾಕಿಂಗ್ ಘಟನೆ ಉತ್ತರ ಪ್ರದೇಶದ ಬಲರಾಮ್‌ಪುರದಲ್ಲಿ ವರದಿಯಾಗಿದೆ.
ಆರೋಪಿ ವ್ಯಕ್ತಿಯನ್ನು ರಾಮ್ ಲಗನ್ ಗೌತಮ್ ಎಂದು ಗುರುತಿಸಲಾಗಿದೆ. ಹತ್ಯೆ ನಡೆದು ಮೂರು ದಿನಗಳ ಬಳಿಕ ಮನೆಯಿಂದ ವಿಪರೀತ ದುರ್ವಾಸನೆ ಬರಲು ಆರಂಭಿಸಿದೆ. ಇದನ್ನು ಗಮನಿಸಿದ ಅಕ್ಕಪಕ್ಕದ ಮನೆಯವರು ಹೆಚ್ಚು ಸಮಯ ವ್ಯರ್ಥ ಮಾಡದೆ ತಕ್ಷಣವೇ ಪೊಲೀಸರಿಗೆ ದೂರು ನೀಡಿದ್ದಾರೆ. ಸ್ಥಳೀಯರ ದೂರಿನ ಅನ್ವಯ ಸ್ಥಳಕ್ಕೆ ಬಂದ ಪೊಲೀಸರು, ಮನೆಯ ಬಾಗಿಲು ತೆರೆದಾಗ ಅಚ್ಚರಿ ಕಾದಿತ್ತು.
ಆರೋಪಿ ಗೌತಮ್ನನ್ನು ಮಾರ್ಚ್ 31ರಂದು ಬಿಜ್ನೋರ್ ಪೊಲೀಸ್ ಠಾಣಾ ವ್ಯಾಪ್ತಿಯ ಸರ್ವನ್ ನಗರ ಪ್ರದೇಶದಲ್ಲಿ ಬಂಧಿಸಲಾಗಿದ್ದು, ಪೊಲೀಸ್ ವರದಿಗಳ ಪ್ರಕಾರ, ಗೌತಮ್ ತನ್ನ ಹೆಂಡತಿ ಮತ್ತು ಮಕ್ಕಳೊಂದಿಗೆ ಮಾರ್ಚ್ 15ರಿಂದ ಈ ಪ್ರದೇಶದಲ್ಲಿ ಬಾಡಿಗೆಗೆ ವಾಸವಾಗಿದ್ದನು. ತನಿಖೆಯಲ್ಲಿ ಗೌತಮ್ ತನ್ನ ಹೆಂಡತಿ ಪರ ಪುರುಷನೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಾಳೆ ಎಂದು ಅನುಮಾನಿಸಿದ್ದನು.
ಅನುಮಾನದ ಹುಚ್ಚು ಹೆಚ್ಚಾಗಿ ಈ ಮಕ್ಕಳು ಯಾರದ್ದು ಎಂದು ಪ್ರಶ್ನಿಸಿದ್ದನಂತೆ. ಬಲವಂತವಾಗಿ ಮನೆಯ ಬಾಗಿಲು ತೆರೆದ ಪೊಲೀಸರು, ಶವಗಳನ್ನು ಹೊರತೆಗೆದು ತನಿಖೆ ಕೈಗೊಂಡ ನಂತರವೇ ಘಟನೆಯ ಭಯಾನಕ ಸತ್ಯ ಹೊರಬಿದ್ದಿದೆ,(ಏಜೆನ್ಸೀಸ್).