

ಲಖನೌ: ತಂಬಾಕು ಪ್ಯಾಕೆಟ್ ಮಾರಾಟ ಮಾಡಲು ನಿರಾಕರಿಸಿದ್ದಕ್ಕೆ ಅಂಗಡಿಯವನನ್ನು ಸಹೋದರು ಹತ್ಯೆ ಮಾಡಿರುವ ಘಟನೆ ಉತ್ತರಪ್ರದೇಶದ ಮುಜಾಫರ್ನಗರದಲ್ಲಿ ನಡೆದಿದೆ. ಕೊಲೆ ಮಾಡಿರುವ ಮೂವರು ಸಹೋದರರ ವಿರುದ್ಧ ಪ್ರಕರಣ ದಾಖಲಿಸಿರುವುದಾಗಿ ಪೊಲೀಸರು ಭಾನುವಾರ(ಸೆಪ್ಟೆಂಬರ್ 22) ತಿಳಿಸಿದ್ದಾರೆ.
ಸಹೋದರರು 50 ವರ್ಷದ ಅಂಗಡಿಯ ಮಾಲೀಕ ರಾಜವೀರ್ ಕಶ್ಯಪ್ ಬಳಿ ತಂಬಾಕು ಪ್ಯಾಕೆಟ್ ನೀಡುವಂತೆ ಕೇಳಿದ್ದಾರೆ. ಕೊಡಲು ನಿರಾಕರಿಸಿದಾಗ ಈಟಿಯಂದ ಹಲ್ಲೆ ಮಾಡಿದ್ದಾರೆ. ಹೆಚ್ಚು ರಕ್ತಸ್ರಾವವಾಗಿ ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ ಎಂದು ಹೇಳಲಾಗುತ್ತಿದೆ. ಆರೋಪಿಗಳನ್ನು ದೀಪಕ್, ತಿಲ್ಲು ಮತ್ತು ಮಂಗು ಎಂದು ಪೊಲೀಸರು ಗುರುತಿಸಿದ್ದಾರೆ.
ಮೃತರ ಕುಟುಂಬದವರು ದೂರು ದಾಖಲಿಸಿದ್ದು, ಆರೋಪಿಗಳು ಕಶ್ಯಪ್ ಅವರ ಅಂಗಡಿಗೆ ಕುಡಿದು ಬಂದಿದ್ದು, ತಂಬಾಕು ಪ್ಯಾಕೆಟ್ ನೀಡುವಂತೆ ಒತ್ತಾಯಿಸಿದ್ದಾರೆ. ಆದರೆ ಕಶ್ಯಪ್ ನೀಡಲು ಒಪ್ಪದಿದ್ದಾಗ ಅವರ ಮೇಲೆ ಈಟಿಯಿಂದ ಹಲ್ಲೆ ನಡೆಸಿ ಹತ್ಯೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ ಕಶ್ಯಪ್ ಸಮುದಾಯದವರು ಪ್ರತಿಭಟನೆ ನಡೆಸಿದರು.
ಸದ್ಯ ತಲೆಮರೆಸಿಕೊಂಡಿರುವ ಆರೋಪಿ ಸಹೋದರರ ಹುಡುಕಾಟಕ್ಕಾಗಿ ಮೂರು ಪೊಲೀಸ್ ತಂಡಗಳನ್ನು ರಚಿಸಲಾಗಿದೆ. ಮೂರು ಪೊಲೀಸ್ ತಂಡಗಳು ಆರೋಪಿಗಳಿಗಾಗಿ ಶೋಧ ನಡೆಸುತ್ತಿವೆ ಎಂದು ಸರ್ಕಲ್ ಆಫೀಸರ್ (ಸಿಒ) ಗಜೇಂದ್ರಪಾಲ್ ಸಿಂಗ್ ತಿಳಿಸಿದ್ದಾರೆ. ಗ್ರಾಮದಲ್ಲಿ ಮುಂಜಾಗ್ರತಾ ಕ್ರಮವಾಗಿ ಬಿಗಿ ಬಂದೋಬಸ್ತ್ ಮಾಡಲಾಗಿದೆ ಎನ್ನಲಾಗಿದೆ. (ಏಜೆನ್ಸೀಸ್)