

ಅಮರಾವತಿ: ಕೋಟ್ಯಂತರ ಮಂದಿಯ ಆರಾಧ್ಯದೈವ ತಿರುಪತಿ(Tirupati ) ವೆಂಕಟೇಶ್ವರ ಸನ್ನಿಧಿಯಲ್ಲಿ ನೀಡಲಾಗುವ ಲಡ್ಡುಗಳಲ್ಲಿ(Laddu) ಪ್ರಾಣಿಗಳ ಕೊಬ್ಬನ್ನು ಬಳಸಲಾಗಿದೆ ಎಂಬ ವಿವಾದದ(row) ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ರಾಜ್ಯದ ಎಲ್ಲಾ ದೇವಾಲಯಗಳಲ್ಲಿ ಶುದ್ಧೀಕರಣ ಪ್ರಕ್ರಿಯೆಯನ್ನು ಶೀಘ್ರದಲ್ಲೇ ಕೈಗೊಳ್ಳಲಾಗುವುದು ಎಂದು ಶನಿವಾರ(ಸೆಪ್ಟೆಂಬರ್ 22) ತಿಳಿಸಿದ್ದಾರೆ.
ಧಾರ್ಮಿಕ ಭಾವನೆಗಳನ್ನು ಗೌರವಿಸಲು ಸರ್ಕಾರದ ಬದ್ಧತೆ ಕುರಿತು ಸಿಎಂ ಚಂದ್ರಬಾಬು ನಾಯ್ಡು ಧಾರ್ಮಿಕ ಮುಖಂಡರನ್ನು ಸಂಪರ್ಕಿಸಿದ ನಂತರ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ತಿಳಿಸಿದರು. ತಿರುಮಲ ಸಮಸ್ಯೆಗೆ ಸಂಬಂಧಿಸಿದಂತೆ ಅಗತ್ಯ ಕ್ರಮಗಳು ಮತ್ತು ಅವುಗಳ ಅನುಷ್ಠಾನದ ಬಗ್ಗೆ ಚರ್ಚೆ ನಡೆಯುತ್ತಿದೆ ಎಮದು ಹೇಳಿದರು.
ತಿರುಪತಿ ಲಡ್ಡು ವಿವಾದಕ್ಕೆ ಸಂಬಂಧಿಸಿದಂತೆ ಜೀರ್ ಸ್ವಾಮಿ, ಕಂಚಿ ಸ್ವಾಮಿ ಮತ್ತು ಇತರ ಧಾರ್ಮಿಕ ಮುಖಂಡರೊಂದಿಗೆ ಸಮಾಲೋಚಿಸಿದ ನಂತರ ಶೀಘ್ರದಲ್ಲೇ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು. ಇದೆ ವೇಳೆ ವೈಎಸ್‌ಆರ್‌ಸಿಪಿಯನ್ನು ದೂಷಿಸಿದ ಅವರು ಪಕ್ಷವು ಅಪರಾಧವನ್ನು ಮಾಡಿದ್ದು ಮಾತ್ರವಲ್ಲದೆ ಇದು ರಾಜಕೀಯ ದ್ವೇಷದಿಂದ ಹೀಗೆ ಹೇಳಲಾಗುತ್ತಿದೆ ಎಂದು ನಾಚಿಕೆಯಿಲ್ಲದೆ ಹೇಳಿಕೊಂಡಿದೆ.
ಒಂದು ಕೆಜಿ ಹಸುವಿನ ತುಪ್ಪವನ್ನು 320 ರೂಪಾಯಿಗೆ ಹೇಗೆ ಪಡೆಯಲು ಸಾಧ್ಯ. ವಿಶ್ವಪ್ರಸಿದ್ಧ ಪವಿತ್ರ ಯಾತ್ರಾ ಕೇಂದ್ರವಾದ ತಿರುಮಲಕ್ಕೆ ಸಂಬಂಧಿಸಿದಂತೆ ಯಾವುದೇ ರೀತಿಯ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಬಹಳ ಎಚ್ಚರಿಕೆಯಿಂದ ಇರಬೇಕು ಎಂದು ಟೀಕಿಸಿದರು. ವೈಎಸ್ಆರ್ ಕಾಂಗ್ರೆಸ್ ಪಕ್ಷದ ಆಡಳಿತದಲ್ಲಿ ಸಂಗ್ರಹಿಸಲಾದ ತುಪ್ಪದಲ್ಲಿ ಮೀನಿನ ಎಣ್ಣೆ ಮತ್ತು ಬೀಫ್ ಟ್ಯಾಲೋ ಕಂಡುಬಂದಿದೆ ಎಂದು ಲ್ಯಾಬ್ ವರದಿಯಲ್ಲಿ ಬಹಿರಂಗವಾಗಿದೆ ಎಂದು ಅವರು ಉಲ್ಲೇಖಿಸಿದರು. (ಏಜೆನ್ಸೀಸ್)