

ನವದೆಹಲಿ: ತಿರುಮಲ ಲಡ್ಡು ಪ್ರಸಾದದಲ್ಲಿ ಕಲಬೆರಕೆ ಮಾಡುತ್ತಿರುವ ಬಗ್ಗೆ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿದ್ದು, ಆಂಧ್ರಪ್ರದೇಶ ಸರ್ಕಾರದಿಂದ ವಿಸ್ತೃತ ವರದಿ ಕೇಳಿರುವುದಾಗಿ ಕೇಂದ್ರ ಆರೋಗ್ಯ ಸಚಿವ ಜೆ.ಪಿ.ನಡ್ಡಾ ತಿಳಿಸಿದರು.
ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್‌ಎಸ್‌ಎಸ್‌ಎಐ) ವರದಿಯನ್ನು ಪರಿಶೀಲಿಸಿ ಸಂಪೂರ್ಣ ತನಿಖೆ ನಡೆಸಲಿದೆ. ಬಳಿಕ ಆಹಾರ ಸುರಕ್ಷತಾ ಮಾನದಂಡಗಳ ಪ್ರಕಾರ ಸೂಕ್ತ ಕ್ರಮಕೈಗೊಳ್ಳಲಾಗುತ್ತದೆ ಎಂದು ಹೇಳಿದರು. ಬುಧವಾರ ನಡೆದ ಎನ್‌ಡಿಎ ಶಾಸಕಾಂಗ ಪಕ್ಷದ ಸಭೆಯಲ್ಲಿ ಹಿಂದಿನ ವೈಎಸ್ ಜಗನ್ ಮೋಹನ್ ರೆಡ್ಡಿ ನೇತೃತ್ವದ ಸರ್ಕಾರವು ತಿರುಪತಿ ದೇವಸ್ಥಾನವನ್ನು ಸಹ ಬಿಡಲಿಲ್ಲ ಎಂದು ನಾಯ್ಡು ಹೇಳಿದ್ದಾರೆ.
ಹಿಂದಿನ ಸರ್ಕಾರದಲ್ಲಿ ಲಡ್ಡು ತಯಾರಿಸಲು ಗುಣಮಟ್ಟವಿಲ್ಲದ ಪದಾರ್ಥಗಳು ಮತ್ತು ಪ್ರಾಣಿಗಳ ಕೊಬ್ಬನ್ನು ಬಳಸಲಾಗುತ್ತಿತ್ತು ಎಂದು ಆರೋಪಿಸಿದ್ದಾರೆ. ಆಂಧ್ರದ ಮುಖ್ಯಮಂತ್ರಿ ಏನೇ ಹೇಳಿದ್ದರೂ ಅದು ಗಂಭೀರ ಕಳವಳಕಾರಿ ಸಂಗತಿಯಾಗಿದೆ. ವಿಸ್ತೃತ ತನಿಖೆ ಅಗತ್ಯವಾಗಿದ್ದು ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದು ತಿಳಿಸಿದರು.
ಲ್ಯಾಬ್ ವರದಿಗಳನ್ನು ತಿರುಮಲ ತಿರುಪತಿ ದೇವಸ್ಥಾನ (ಟಿಟಿಡಿ) ನೀಡಿದೆ. ಅದರಲ್ಲಿ ನೀಡಲಾದ ತುಪ್ಪದ ಮಾದರಿಯಲ್ಲಿ ಬೀಫ್ ಟ್ಯಾಲೋ, ಮೀನಿನ ಎಣ್ಣೆ ಇರುವುದು ದೃಢಪಟ್ಟಿದೆ ಎಂದು ವರದಿಯಾಗಿದೆ. ತುಪ್ಪದ ಮಾದರಿಗಳನ್ನು 2024 ಜುಲೈ 9 ರಂದು ತೆಗೆದುಕೊಳ್ಳಲಾಗಿದ್ದು, ಜುಲೈ 16ರಂದು ವರದಿ ಹೊರಬಂದಿದೆ ಎಂದು ಟಿಡಿಪಿ ವಕ್ತಾರರು ಹೇಳಿದ್ದಾರೆ. ಆದರೆ ಆಂಧ್ರಪ್ರದೇಶ ಸರ್ಕಾರ ಅಥವಾ ಟಿಟಿಡಿಯಿಂದ ಪ್ರಯೋಗಾಲಯದ ವರದಿಯ ಬಗ್ಗೆ ಯಾವುದೇ ಅಧಿಕೃತ ದೃಢೀಕರಣವಿಲ್ಲ. ಈ ಆರೋಪವನ್ನು ವೈಎಸ್‌ಆರ್‌ಸಿಪಿ ನಾಯಕರು ನಿರಾಕರಿಸಿದ್ದಾರೆ.(ಏಜೆನ್ಸೀಸ್)