

ತಿರುಪತಿ: ತಿಮ್ಮಪ್ಪ ದೇವಾಲಯದ ಲಡ್ಡು ಪ್ರಸಾದ ವಿವಾದ ಆಂಧ್ರದಲ್ಲಿ ಸದ್ದು ಮಾಡುತ್ತಿದ್ದು, ಖ್ಯಾತ ವಕೀಲ ವಿನೀತ್ ಜಿಂದಾಲ್ ಮಾಜಿ ಮುಖ್ಯಮಂತ್ರಿ ವೈ.ಎಸ್. ಜಗನ್ ಮೋಹನ್ ರೆಡ್ಡಿ ವಿರುದ್ಧ ಕೇಂದ್ರ ಗೃಹ ಸಚಿವಾಲಯಕ್ಕೆ ದೂರು ಸಲ್ಲಿಸಿದ್ದಾರೆ.
ತಿರುಮಲ ಲಡ್ಡು ತಯಾರಿಕೆಯಲ್ಲಿ ಪ್ರಾಣಿಗಳ ಕೊಬ್ಬು ಮತ್ತು ಮೀನಿನ ಎಣ್ಣೆಯನ್ನು ಬಳಸಿ ಜಗನ್ ಹಿಂದೂಗಳ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.
ವೈಸಿಪಿ ಮುಖ್ಯಸ್ಥರು ತಮ್ಮ ಕೃತ್ಯಗಳಿಂದ ಹಿಂದೂಗಳ ಆತ್ಮವನ್ನು ಕೊಂದಿದ್ದಾರೆ ಮತ್ತು ಅವರ ನಂಬಿಕೆ, ತಿರುಪತಿ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದ ಪಾವಿತ್ರ್ಯತೆಗೆ ಬೆಂಕಿ ಹಚ್ಚಿದ್ದಾರೆ ಎಂದು ದೂರಿದ್ದು, ಕೇಂದ್ರ ಗೃಹ ಸಚಿವಾಲಯ ಹಾಗೂ ಆಂಧ್ರ ಮತ್ತು ಉತ್ತರ ಪ್ರದೇಶದ ಡಿಜಿಪಿಗಳಿಗೆ ದೂರು ನೀಡಿದ್ದಾರೆ.
ಪ್ರಾಣಿ ಕೊಬ್ಬಿನ ತುಪ್ಪ ಪೂರೈಸಿದ ಗುತ್ತಿಗೆದಾರನ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ವೈಸಿಪಿ ಮುಖ್ಯಸ್ಥ ಜಗನ್ ಹಾಗೂ ಅಂದಿನ ಟಿಟಿಡಿ ಆಡಳಿತ ವರ್ಗಕ್ಕೆ ಮನವಿ ಮಾಡಿದ್ದರೂ, ಜಗನ್ ಉದ್ದೇಶಪೂರ್ವಕವಾಗಿ ಇಂತಹ ಕೃತ್ಯಗಳನ್ನು ಎಸಗಿದ್ದಾರೆ. ಅವರ ವಿರುದ್ಧ ತನಿಖೆ ನಡೆಸಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಇದಕ್ಕೆ ಕಾರಣರಾದ ಪ್ರತಿಯೊಬ್ಬರ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 152, 192, 196, 298 ಮತ್ತು 353 ರ ಅಡಿಯಲ್ಲಿ ತಕ್ಷಣವೇ ಪ್ರಕರಣ ದಾಖಲಿಸಬೇಕು ಎಂದು ಅವರು ವಿನಂತಿಸಿದ್ದಾರೆ. ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿಯೂ ಕ್ರಮ ಕೈಗೊಳ್ಳುವಂತೆ ವಕೀಲ ವಿನೀತ್ ಜಿಂದಾಲ್ ಮನವಿ ಮಾಡಿದ್ದಾರೆ.