ನಾನು ರಾಜೀನಾಮೆ ನೀಡಲು ಪ್ರಧಾನಿ ಮೋದಿಯೇ ಕಾರಣ; ಕೇಜ್ರಿವಾಲ್​ ಹೀಗೆಳಿದ್ದೇಕೆ? Kejriwal resignation

Untitled-design-2024-09-22T134333.354
Published on

ನವದೆಹಲಿ: ಆಮ್​ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್​ ಕೇಜ್ರಿವಾಲ್(Kejriwal)​ ಇತ್ತೀಚೆಗೆ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದಿರುವುದ ಗೊತ್ತೆ ಇದೆ. ರಾಜೀನಾಮೆ(resignation) ನೀಡಲು ಕಾರಣವೇನು ಎಂಬುದನ್ನು ಸ್ವತಃ ಕೇಜ್ರಿವಾಲ್​ ಅವರೇ ಬಹಿರಂಗಪಡಿಸಿದ್ದಾರೆ. ಪ್ರತಿಪಕ್ಷಗಳು ಮತ್ತು ಕೇಂದ್ರೀಯ ಸಂಸ್ಥೆಗಳು ತಮ್ಮ ವಿರುದ್ಧ ಹೊರಿಸಿದ ಭ್ರಷ್ಟಾಚಾರ ಆರೋಪಗಳಿಂದ ಮನನೊಂದು ರಾಜೀನಾಮೆ ನೀಡಿದ್ದಾಗಿ ಭಾನುವಾರ (ಸೆಪ್ಟೆಂಬರ್​​ 22)ತಿಳಿಸಿದರು.

ಪ್ರಧಾನಿ ನರೇಂದ್ರ ಮೋದಿ ಅವರು ನನ್ನ ಪ್ರಾಮಾಣಿಕತೆಯ ಮೇಲೆ ದಾಳಿ ಮಾಡಿ ಜೈಲಿಗೆ ಕಳುಹಿಸಿದರು. ಭ್ರಷ್ಟಾಚಾರದ ಆರೋಪಗಳಿಂದ ನೋವಾಗಿ ನಾನು ರಾಜೀನಾಮೆ ನೀಡಿದ್ದೇನೆ. ಇದುವರೆಗೂ ನಾನು ಗೌರವವನ್ನು ಸಂಪಾದಿಸಿದ್ದೇನೆ ಹೊರತು ಹಣವನ್ನಲ್ಲ. ಕಳೆದ ಹತ್ತು ವರ್ಷಗಳಿಂದ ಪ್ರಾಮಾಣಿಕವಾಗಿ ಸರ್ಕಾರವನ್ನು ನಡೆಸುತ್ತಿದ್ದೇವೆ. ನಾವು ವಿದ್ಯುತ್ ಮತ್ತು ನೀರು ಮುಕ್ತಗೊಳಿಸಿದ್ದೇವೆ. ಉತ್ತಮ ಶಿಕ್ಷಣದ ಜತೆಗೆ ಜನರಿಗೆ ಉಚಿತ ಚಿಕಿತ್ಸೆ ನೀಡಿದ್ದೇವೆ. ಮೋದಿಜಿ ಅವರು ತಮ್ಮ ವಿರುದ್ಧ ಗೆಲ್ಲಲು ಬಯಸಿ ಆಕ್ರಮಣ ಮಾರ್ಗವನ್ನು ಅನುಸರಿಸಿದ್ದಾರೆ. ಎಎಪಿ ಅಪ್ರಾಮಾಣಿಕರೆಂದು ಸಾಬೀತುಪಡಿಸಲು ಪಕ್ಷದ ನಾಯಕರನ್ನು ಜೈಲಿಗೆ ಹಾಕುವಂತೆ ಸಂಚು ರೂಪಿಸಿದರು. ಭ್ರಷ್ಟಾಚಾರದಲ್ಲಿ ತೊಡಗಿಸಿಕೊಳ್ಳಲು ಅಥವಾ ಸಿಎಂ ಕುರ್ಚಿಯಲ್ಲಿ ಕೂರಲು ರಾಜಕೀಯಕ್ಕೆ ಬಂದಿಲ್ಲ ಎಂಬ ಕಾರಣಕ್ಕೆ ರಾಜೀನಾಮೆ ನೀಡಿದ್ದೇನೆ ಎಂದರು.

ಈ ನಾಯಕರದ್ದು ದಪ್ಪ ಚರ್ಮ, ಆರೋಪಗಳಿಂದ ಪ್ರಭಾವಿತರಾಗುವುದಿಲ್ಲ. ಆದರೆ ನಾನು ನಾಯಕನಲ್ಲ ಈ ಆರೋಪಗಳಿಂದ ಪ್ರಭಾವಿತನಾಗಿದ್ದೇನೆ. ನವರಾತ್ರಿ ಆರಂಭವಾದಾಗ ಮುಖ್ಯಮಂತ್ರಿ ಮನೆಯನ್ನು ಖಾಲಿ ಮಾಡುತ್ತೇನೆ. ನನಗೆ ಮನೆಯೂ ಇಲ್ಲ, ಹತ್ತು ವರ್ಷಗಳಲ್ಲಿ ಗಳಿಸಿದ್ದು ಬರೀ ಪ್ರೀತಿ ಅಷ್ಟೇ. ಅದರ ಪರಿಣಾಮವಾಗಿ ನನಗೆ ತುಂಬಾ ಜನರಿಂದ ಮನೆ ತೆಗೆದುಕೊಳ್ಳುವಂತೆ ಹೇಳುತ್ತಿರುವುದಾಗಿ ತಿಳಿಸಿದರು.

ಅಬಕಾರಿ ನೀತಿ ಹಗರಣ ಪ್ರಕರಣದಲ್ಲಿ ಸುಪ್ರೀಂಕೋರ್ಟ್‌ನಿಂದ ಜಾಮೀನು ಪಡೆದ ಎರಡು ದಿನಗಳ ನಂತರ ಸಿಎಂ ಅರವಿಂದ್​​ ಕೇಜ್ರಿವಾಲ್ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದಾರೆ. ನ್ಯಾಯಾಲಯದಿಂದ ನನಗೆ ನ್ಯಾಯ ಸಿಕ್ಕಿದೆ ಈಗ ಸಾರ್ವಜನಿಕ ನ್ಯಾಯಾಲಯ ನ್ಯಾಯ ನೀಡಲಿದೆ ಎಂದು ಹೇಳಿದರು. ಪ್ರಸ್ತುತ ಎಎಪಿ ನಾಯಕಿ ಅತಿಶಿ ನೂತನ ಮುಖ್ಯಮಂತ್ರಿಯಾಗಿದ್ದಾರೆ. ದೆಹಲಿಯಲ್ಲಿ ಎಎಪಿ ಸರ್ಕಾರದ ಅವಧಿ ಫೆಬ್ರವರಿ 2025ಕ್ಕೆ ಕೊನೆಗೊಳ್ಳಲಿದೆ. ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷವು 2013ರಿಂದ ದೆಹಲಿಯಲ್ಲಿ ಅಧಿಕಾರದಲ್ಲಿದೆ. (ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net