ಭಾರತೀಯ ವಾಯುಪಡೆಯ ನೂತನ ಮುಖ್ಯಸ್ಥರಾಗಿ ಅಮರ್ ಪ್ರೀತ್ ಸಿಂಗ್ ನೇಮಕ

Untitled-design-2024-09-21T161853.472
Published on

ನವದೆಹಲಿ: ಏರ್ ಮಾರ್ಷಲ್ ಅಮರ್ ಪ್ರೀತ್ ಸಿಂಗ್ ಅವರನ್ನು ವಾಯುಪಡೆಯ ಮುಂದಿನ ಮುಖ್ಯಸ್ಥರನ್ನಾಗಿ ನೇಮಿಸಲಾಗಿದೆ. ಪ್ರಸ್ತುತ ಅವರು ವಾಯುಪಡೆಯ ಉಪಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿದ್ದಾರೆ. 2024 ಸೆಪ್ಟೆಂಬರ್​​​ 30ರಂದು ಏರ್​ ಚೀಫ್​ ಮಾರ್ಷಲ್​ ಆಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಸದ್ಯ ವಾಯುಪಡೆಯ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಆಗಿ ವಿವೇಕ್ ರಾಮ್ ಚೌಧರಿ ಕಾರ್ಯನಿರ್ವಹಿಸುತ್ತಿದ್ದಾರೆ.

ಈ ದೊಡ್ಡ ಜವಾಬ್ದಾರಿ ವಹಿಸಿಕೊಳ್ಳುತ್ತಿರುವ ಅಮರ್ ಪ್ರೀತ್​ ಸಿಂಗ್​ ಅವರು 2023 ಫೆಬ್ರವರಿ 1 ರಂದು ಭಾರತೀಯ ವಾಯುಪಡೆಯ 47ನೇ ಉಪಮುಖ್ಯಸ್ಥರ ಹುದ್ದೆಯನ್ನು ವಹಿಸಿಕೊಂಡರು. ಕಳೆದ ಕೆಲವು ದಿನಗಳಿಂದ ಅಮರ್ ಪ್ರೀತ್ ಸಿಂಗ್ ಅವರ ಹೆಸರು ಮಾತ್ರ ವಾಯುಪಡೆಯ ನೂತನ ಮುಖ್ಯಸ್ಥರ ಸ್ಥಾನಕ್ಕೆ ಬರಬಹುದು ಎಂಬ ಊಹಾಪೋಹ ಇತ್ತು. ಈಗ ಆ ಸುದ್ದಿ ಅಧಿಕೃತವಾಗಿ ದೃಢಪಟ್ಟಿದೆ.

ಏರ್‌ ಮಾರ್ಷಲ್‌ ಅಮರ್‌ ಪ್ರೀತ್‌ ಸಿಂಗ್‌ ತಮ್ಮ ಸೇವಾವಧಿಯಲ್ಲಿ ಹಲವು ಮಹತ್ತರ ಸಾಧನೆ ಮಾಡಿದ್ದಾರೆ. ಅವರನ್ನು 21 ಡಿಸೆಂಬರ್ 1984ರಂದು ದುಂಡಿಗಲ್‌ನ ಏರ್​​ಫೋರ್ಸ್ ಅಕಾಡೆಮಿಯಿಂದ ಭಾರತೀಯ ವಾಯುಪಡೆಯ ಫೈಟರ್ ಸ್ಟ್ರೀಮ್‌ನಲ್ಲಿ ನಿಯೋಜಿಸಲಾಯಿತು. ಅವರು 38 ವರ್ಷಗಳಿಂದ ವಾಯುಪಡೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಏರ್​​ ಮಾರ್ಷಲ್ ಅಮರ್ ಪ್ರೀತ್ ಸಿಂಗ್ ಅವರು ರಾಷ್ಟ್ರೀಯ ರಕ್ಷಣಾ ಅಕಾಡೆಮಿ ಖಡಕ್ವಾಸ್ಲಾ ಮತ್ತು ಏರ್​​ಫೋರ್ಸ್ ಅಕಾಡೆಮಿ ದುಂಡಿಗಲ್ ಅವರಿಂದ ತರಬೇತಿ ಪಡೆದಿದ್ದಾರೆ. ಅವರು ವೆಲ್ಲಿಂಗ್ಟನ್‌ನ ರಕ್ಷಣಾ ಸೇವೆಗಳ ಸಿಬ್ಬಂದಿ ಕಾಲೇಜಿನ ಹಳೆಯ ವಿದ್ಯಾರ್ಥಿಯೂ ಆಗಿದ್ದಾರೆ. ಅವರ ಹೆಸರಿನಲ್ಲಿ ಇನ್ನೊಂದು ಸಾಧನೆಯೂ ಇದೆ. ನವದೆಹಲಿಯ ರಾಷ್ಟ್ರೀಯ ರಕ್ಷಣಾ ಕಾಲೇಜಿನಲ್ಲಿ ತರಬೇತಿಯನ್ನೂ ಪಡೆದಿದ್ದಾರೆ.

ಅಲ್ಲದೆ ವಿವಿಧ ರೀತಿಯ ಸ್ಥಿರ ಮತ್ತು ರೋಟರಿ ವಿಂಗ್​​ ವಿಮಾನಗಳಲ್ಲಿ 5000 ಗಂಟೆಗಳ ಹಾರಾಟದ ಅನುಭವವನ್ನು ಹೊಂದಿದ್ದಾರೆ. ಅಲ್ಲದೆ ಇತ್ತೀಚೆಗೆ ಭಾರತೀಯ ಯುದ್ಧ ವಿಮಾನ ತೇಜಸ್ ಅನ್ನು ಹಾರಿಸಿ ಎಲ್ಲರನ್ನೂ ಅಚ್ಚರಿಗೊಳಿಸಿದ್ದಾರೆ. ಅದಕ್ಕೆ ಕಾರಣವಾಗಿದ್ದು ಅವರು ತಮ್ಮ 59 ವರ್ಷದಲ್ಲಿ ತೇಜಸ್​ ವಿಮಾನವನ್ನು ಹಾರಿಸಿರುವುದು. ಅವರ ಸೇವೆಗಾಗಿ ಪರಮ ವಿಶಿಷ್ಟ ಸೇವಾ ಪದಕ ಮತ್ತು ಅತಿ ವಿಶಿಷ್ಟ ಸೇವಾ ಪದಕವನ್ನು ನೀಡಿ ಗೌರವಿಸಲಾಗಿದೆ. (ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net