

ಬೆಂಗಳೂರು: ಬಾರ್ನಲ್ಲಿ ಚಾರ್ಜ್ಗೆ ಹಾಕಿದ್ದ ಮೊಬೈಲ್ ಕದ್ದಿದ್ದಾನೆಂದು ಚಾಲಕನ ಜತೆ ಜಗಳವಾಡಿದ ಆರು ಮಂದಿ ದುಷ್ಕರ್ವಿುಗಳು, ಆತನನ್ನು ತಮ್ಮ ರೂಮ್ಗೆ ಎಳೆದೊಯ್ದು ಮನಸೋ ಇಚ್ಛೇ ಹಲ್ಲೆ ನಡೆಸಿ ಹತ್ಯೆ ಮಾಡಿದ್ದಾರೆ. ನಾಗರಬಾವಿಯ ಜ್ಯೋತಿನಗರದ ನಿವಾಸಿ ಪ್ರಸಾದ್ (40) ಕೊಲೆಯಾದ ವ್ಯಕ್ತಿ. ಈ ಕುರಿತು ಅವರ ಪತ್ನಿ ಸುಕನ್ಯಾ ದೂರು ನೀಡಿದ್ದಾರೆ.
ಕೃತ್ಯದಲ್ಲಿ ಭಾಗಿಯಾಗಿದ್ದ ಸುಭಾಷ್ ಎಂಬಾತನನ್ನು ಬಂಧಿಸಲಾಗಿದೆ. ಇತರ ಐವರು ಆರೋಪಿಗಳು ತಲೆಮರೆಸಿಕೊಂಡಿದ್ದು, ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಚಂದ್ರಾ ಲೇಔಟ್ ಪೊಲೀಸರು ತಿಳಿಸಿದ್ದಾರೆ.
ಏನಿದು ಪ್ರಕರಣ?: ಖಾಸಗಿ ಕಂಪನಿಯೊಂದರ ಕಾರು ಚಾಲಕ ಪ್ರಸಾದ್, ಪತ್ನಿ ಹಾಗೂ ಪುತ್ರನ ಜತೆ ಜ್ಯೋತಿನಗರದಲ್ಲಿ ವಾಸಿಸುತ್ತಿದ್ದರು. ಮಾ.11ರಂದು ಕಂಪನಿಗೆ ರಜೆ ಇದ್ದ ಹಿನ್ನೆಲೆಯಲ್ಲಿ ಪ್ರಸಾದ್ ತನ್ನ ಪತ್ನಿ ಬಳಿ 500 ರೂ. ಪಡೆದು, ಸಂಜೆ 4 ಗಂಟೆಗೆ ಮದ್ಯ ಸೇವಿಸಲು ಬಾರ್ಗೆ ತೆರಳಿದ್ದರು. ರಾತ್ರಿ 8.30 ಗಂಟೆಗೆ ಪ್ರಸಾದ್ ಪತ್ನಿ ಸುಕನ್ಯಾ ಅವರ ಮೊಬೈಲ್ಗೆ ಅಪರಿಚಿತನೊಬ್ಬ ಕರೆ ಮಾಡಿ, ‘ನಿಮ್ಮ ಪತಿ ನಮ್ಮ ಮೊಬೈಲ್ ಕದ್ದಿದ್ದು, ನಮ್ಮ ಬಳಿ ಇದ್ದಾರೆ’ ಎಂದು ಹೇಳಿ ಸ್ಥಳದ ವಿಳಾಸ ತಿಳಿಸಿ ಬರುವಂತೆ ಸೂಚಿಸಿದ್ದ. ಅದರಂತೆ ಸುಕನ್ಯಾ ನಾಗರಾಬಾವಿ ಸರ್ಕಲ್ ಬಳಿ ಇರುವ ಪಿಜ್ಜಾ ಮಳಿಗೆಯೊಂದರ ಬಳಿ ಹೋದಾಗ ವ್ಯಕ್ತಿಯೊಬ್ಬ, ಪ್ರಸಾದ್ ಇದ್ದ ರೂಮ್ಗೆ ಕರೆದೊಯ್ದಿದ್ದ. ರೂಮಲ್ಲಿ ಪತಿ ಜತೆ 6 ಮಂದಿ ಅಪರಿಚಿತರಿದ್ದರು.
ಮೊಬೈಲ್ ಕದ್ದಿಲ್ಲ ಎಂದರೂ ಬಿಡಲಿಲ್ಲ: ಮೊಬೈಲ್ ಕಳವು ಮಾಡಿದ್ದೀರಾ ಎಂದು ಪತಿಯನ್ನು ಸುಕನ್ಯಾ ಪ್ರಶ್ನಿಸಿದ್ದಾರೆ. ಆಗ ಪ್ರಸಾದ್ ಕದ್ದಿಲ್ಲ ಎಂದು ಆಣೆ ಪ್ರಮಾಣ ಮಾಡಿದ್ದರು. ಇದಕ್ಕೆ ಆಕ್ರೋಶಗೊಂಡ ಅಪರಿಚಿತನೊಬ್ಬ ‘ಸುಳ್ಳು ಹೇಳುತ್ತೀಯಾ’ ಎಂದು ಪ್ರಸಾದ್ ಕೆನ್ನೆಗೆ ಹೊಡೆದಿದ್ದಾನೆ. ಈ ವೇಳೆ ಸುಕನ್ಯಾ ‘ಈ ರೀತಿ ಮಾಡುವುದು ಸರಿಯಲ್ಲ. ಪತಿ ಪಾನಮತ್ತರಾಗಿದ್ದು, ಈಗ ಕಳುಹಿಸಿಕೊಡಿ ಬೆಳಗ್ಗೆ ವಿಚಾರಿಸಿ ಕರೆದುಕೊಂಡು ಬರುತ್ತೇನೆ’ ಎಂದಿದ್ದಾರೆ. ಅದಕ್ಕೆ ಒಪ್ಪದ ಆರೋಪಿಗಳು, ಪ್ರಸಾದ್ ಅವರನ್ನು ತಮ್ಮ ಬಳಿಯೇ ಇರಿಸಿಕೊಂಡು ಸುಕನ್ಯಾರನ್ನು ವಾಪಸ್ ಕಳುಹಿಸಿದ್ದರು. ರಾತ್ರಿ 10 ಗಂಟೆಗೆ ಪತಿ ಮೊಬೈಲ್ಗೆ ಸುಕನ್ಯಾ ಕರೆ ಮಾಡಿದಾಗ ಸ್ವೀಕರಿಸಿಲ್ಲ. 10.30ಕ್ಕೆ ಪತಿಯ ಮೊಬೈಲ್ನಿಂದ ಸುಕನ್ಯಾಗೆ ಕರೆ ಮಾಡಿದ್ದ ಆರೋಪಿ, ಮದ್ಯದ ಅಮಲಿನಲ್ಲಿರುವ ನಿಮ್ಮ ಪತಿ ಎದ್ದೇಳುತ್ತಿಲ್ಲ, ಬಂದು ಕರೆದುಕೊಂಡು ಹೋಗುವಂತೆ ಹೇಳಿ ಕರೆ ಸ್ಥಗಿತಗೊಳಿಸಿದ್ದ. ಬಳಿಕ ಸುಭಾಷ್ ಎಂಬಾತ ಜ್ಯೋತಿನಗರಕ್ಕೆ ಬಂದು ಸುಕನ್ಯಾರನ್ನು ಆಟೋದಲ್ಲಿ ಕರೆದೊಯ್ದಿದ್ದ.
ತಲೆಗೆ ಬಲವಾದ ಏಟು ಬಿದ್ದು ಸಾವು: ಸುಕನ್ಯಾ ಪತಿ ಅವರನ್ನು ಕೂಡಿಟ್ಟಿದ್ದ ಮನೆಗೆ ತೆರಳಿದಾಗ ಆರೋಪಿಗಳು ಪರಾರಿಯಾಗಿದ್ದರು. ಪತಿ ಬಿದ್ದಿರುವುದನ್ನು ಕಂಡು ಸುಭಾಷ್ ನೆರವಿನೊಂದಿಗೆ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಪರೀಕ್ಷಿಸಿದ ವೈದ್ಯರು, ಆತ ಮೃತಪಟ್ಟಿರುವುದಾಗಿ ದೃಢಪಡಿಸಿದ್ದರು. ತಲೆಗೆ ಬಲವಾದ ಪೆಟ್ಟಾಗಿ ಮೃತಪಟ್ಟಿರುವುದರ ಬಗ್ಗೆ ವೈದ್ಯರು ಶಂಕಿಸಿದ್ದಾರೆ. ಆರೋಪಿಗಳು ಸುಭಾಷ್ನ ಸ್ನೇಹಿತರು. ಈ ಹಿನ್ನೆಲೆಯಲ್ಲಿ ಆತನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.