

ಬೆಂಗಳೂರು: ಕರೊನಾ ಭೀತಿಯ ಹಿನ್ನೆಲೆಯಲ್ಲಿ ಸರ್ಕಾರ ತುರ್ತು ಪರಿಸ್ಥಿತಿ ಘೋಷಣೆ ಮಾಡಿರುವುದರಿಂದ ಸುಮಾರು 1200 ರಿಂದ 1300 ಕೋಟಿ ರೂ. ಆದಾಯ ಖೋತಾ ಆಗಬಹುದೆಂದು ಅಂದಾಜು ಮಾಡಲಾಗಿದೆ. ಮಾಲ್ಗಳು, ಪಬ್ಗಳು ಬಂದ್ ಆಗುತ್ತಿರುವುದರಿಂದ ವಹಿವಾಟು ಸ್ಥಗಿತವಾಗಿ ಆದಾಯ ಖೋತಾ ಆಗಲಿದೆ.
ಮೊದಲೇ ತೆರಿಗೆ ಸಂಗ್ರಹ ಸುಮಾರು 2000 ಕೋಟಿ ರೂ. ಕಡಿಮೆಯಾಗಬಹುದೆಂದು ಅಂದಾಜು ಮಾಡಲಾಗಿತ್ತು. ಇದೀಗ ಹೆಚ್ಚುವರಿಯಾಗಿ 1300 ಕೋಟಿ ರೂ. ಕಡಿಮೆಯಾಗಬಹುದೆಂದು ಹಣಕಾಸು ಇಲಾಖೆಯ ಅಧಿಕಾರಿಗಳು ಹೇಳುತ್ತಾರೆ. ಈ ತಿಂಗಳಿನಲ್ಲಿ ಸುಮಾರು 9000 ಕೋಟಿ ರೂ.ಗಳ ತೆರಿಗೆ ಸಂಗ್ರಹಣೆಯ ಗುರಿ ಇದೆ. 2 ವಾರಗಳಲ್ಲಿ 4500 ಕೋಟಿ ಸಂಗ್ರಹವಾಗಿದ್ದರೂ ಸಹ, ಉಳಿದ ಎರಡು ವಾರಗಳಲ್ಲಿ 4500 ಕೋಟಿ ರೂ. ಸಂಗ್ರಹವಾಗಬೇಕು.
ಒಂದು ವಾರಕ್ಕೆ 2250 ಕೋಟಿ ರೂ. ಸಂಗ್ರಹವಾಗಬೇಕು. ರಿಟೇಲ್ ವಹಿವಾಟು, ಪೆಟ್ರೋಲ್ ಮತ್ತು ಡಿಸೇಲ್ ಬಂಕ್ಗಳಲ್ಲಿ ವಹಿವಾಟು ಇದ್ದೇ ಇರುತ್ತದೆ. ಅವುಗಳಿಂದ 1000 ಕೋಟಿ ರೂ. ತನಕ ತೆರಿಗೆ ಬರಬಹುದು. ಆದರೆ ಐಟಿ ಕಂಪೆನಿಗಳು ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡುವಂತೆ ಹೇಳಿರುವುದರಿಂದ ಪೆಟ್ರೋಲ್ ಮತ್ತು ಡಿಸೇಲ್ ಬಳಕೆಯೂ ಕಡಿಮೆಯಾಗಬಹುದೆಂದು ಅಂದಾಜು ಮಾಡಲಾಗುತ್ತಿದೆ.