

ರೈಸೆನ್: ಕೋವಿಡ್ 19 ಸೋಂಕು ತಗುಲದಂತೆ ಎಚ್ಚರವಹಿಸಲು ಆಲ್ಕೋಹಾಲ್ ಆಧಾರಿತವಾದ ಸ್ಯಾನಿಟೈಸರ್ ಬಳಸಿ ಕೈ ಸ್ವಚ್ಛಗೊಳಿಸಿಕೊಳ್ಳುವುದು ಕಡ್ಡಾಯವಾಗಿದೆ. ಇದೀಗ ಲಾಕ್ಡೌನ್ನಿಂದಾಗಿ ಮದ್ಯದಂಗಡಿಗಳು ಮುಚ್ಚಿರುವ ಕಾರಣ, ಸ್ಯಾನಿಟೈಸರ್ನಿಂದ ಮದ್ಯ ತಯಾರಿಸಲು ಸಾಕಷ್ಟು ಜನರು ಪ್ರಯತ್ನಿಸುತ್ತಿದ್ದಾರೆ. ಸ್ಯಾನಿಟೈಸರ್ ಅನ್ನೇ ಕುಡಿದು ಪ್ರಾಣ ಕಳೆದುಕೊಂಡಿರುವ ಹಲವು ಉದಾಹರಣಗಳೂ ನಮ್ಮ ಮುಂದಿವೆ.
ಇಂಥದ್ದರಲ್ಲಿ ಮಧ್ಯಪ್ರದೇಶನ ರೈಸೆನ್ನ ನಿವಾಸಿ ಆಲ್ಕೋಹಾಲ್ ಆಧಾರಿತ ಸ್ಯಾನಿಟೈಸರ್ನಿಂದ ಮದ್ಯ ತಯಾರಿಸಿ, ಸಿಕ್ಕಿಬಿದ್ದಿದ್ದಾನೆ. ಈ ತಂತ್ರಜ್ಞಾನ ಆತನಿಗೆ ಎಲ್ಲಿ, ಹೇಗೆ ಸಿಕ್ಕಿತು? ಆತ ಮದ್ಯ ತಯಾರಿಸುವಲ್ಲಿ ಯಶಸ್ವಿಯಾಗಿದ್ದನೇ ಎಂಬ ಮಾಹಿತಿ ಲಭ್ಯವಿಲ್ಲವಾದರೂ ಸದ್ಯ ಈ ಪೊಲೀಸ್ ಅತಿಥಿಯಾಗಿರುವ ಸುದ್ದಿ ಬಂದಿದೆ.
ಸುಲ್ತಾನಪುರದ ಬೊರಿಯಾ ಜಾಗಿರ್ ಗ್ರಾಮದ ನಿವಾಸಿ ಇಂಡಾಲ್ ಸಿಂಗ್ ರಾಜಪೂತ್ ಬಂಧಿತ. ಈತ ಶೇ.72 ಆಲ್ಕೋಹಾಲ್ ಹೊಂದಿರುವ ಸ್ಯಾನಿಟೈಸರ್ನಿಂದ ಮದ್ಯ ತಯಾರಿಸುತ್ತಿದ್ದ ಎಂದು ಸುಲ್ತಾನಪುರ ಠಾಣೆ ಪೊಲೀಸರು ತಿಳಿಸಿದ್ದಾರೆ.
ಇದು ತುಂಬಾ ವಿಶಿಷ್ಟವಾದ ಪ್ರಕರಣವಾಗಿದೆ. ಇಂಡಾಲ್ ಸಿಂಗ್ ರಾಜಪೂತ್ ವಿರುದ್ಧ ಅಬಕಾರಿ ಕಾಯ್ದೆಯಡಿ ದೂರು ದಾಖಲಿಸಿಕೊಳ್ಳಲಾಗಿದೆ ಎಂದು ಎಸ್ಪಿ ಮೊನಿಕಾ ಶುಕ್ಲಾ ಹೇಳಿದ್ದಾರೆ.