ಮೇ 5ಕ್ಕೆ ಘೋಷಣೆಯಾಗಲಿದೆ ಜೆಇಇ ಮೇನ್​ ಮತ್ತು ನೀಟ್​ ಪರೀಕ್ಷೆ ದಿನಾಂಕ

neet
Published on

ನವದೆಹಲಿ: ಕೋವಿಡ್​ 19 ಲಾಕ್​ಡೌನ್​ನಿಂದಾಗಿ ಮುಂದೂಡಲ್ಪಟ್ಟಿರುವ ಜೆಇಇ ಮೇನ್​ ಹಾಗೂ ವೈದ್ಯಕೀಯ ಶಿಕ್ಷಣದ ಪ್ರವೇಶ ಪರೀಕ್ಷೆ ನೀಟ್​ನ ಪರೀಕ್ಷಾ ದಿನಾಂಕಗಳ ಗೊಂದಲ ಶೀಘ್ರದಲ್ಲೇ ಬಗೆಹರಿಯುವ ಲಕ್ಷಣಗಳು ಗೋಚರಿಸಲಾರಂಭಿಸಿವೆ.

ಮಾನವಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಅಧಿಕಾರಿಗಳು ಭಾನುವಾರ ಈ ಬಗ್ಗೆ ಸುಳಿವು ನೀಡಿದ್ದಾರೆ. ಕೇಂದ್ರ ಸಚಿವ ರಮೇಶ್​ ಪೊಖ್ರಿಯಾಲ್​ ನಿಶಾಂಕ್​ ಅವರು ಮೇ 5ರಂದು ಪರೀಕ್ಷೆಯ ದಿನಾಂಕಗಳ ಕುರಿತು ನಿರ್ಧಾರ ಪ್ರಕಟಿಸುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.

ಈ ಮೊದಲು ಜೆಇಇ ಮೇನ್​ ಪರೀಕ್ಷೆಯನ್ನು ಏಪ್ರಿಲ್​ 5, 7, 8 ಮತ್ತು 11ರಂದು ನಡೆಸಲು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್​ಟಿಎ) ನಿರ್ಧರಿಸಿತ್ತು. ಆದರೆ, ಕೋವಿಡ್​ 19ನಿಂದಾಗಿ ರಾಷ್ಟ್ರಾದ್ಯಂತ ಲಾಕ್​ಡೌನ್​ ಘೋಷಣೆಯಾದ ಕಾರಣ ಪರೀಕ್ಷೆಗಳನ್ನು ಮೇ ಕೊನೆಯ ವಾರಕ್ಕೆ ಮುಂದೂಡಿತ್ತು. ಅದರಂತೆ ಮೇ 3ಕ್ಕೆ ನಿಗದಿಯಾಗಿದ್ದ ನೀಟ್​ ಪರೀಕ್ಷೆ ಕೂಡ ಮುಂದೂಡಿಕೆಯಾಗಿತ್ತು.

ಜೆಇಇ ಮೇನ್​ ಮತ್ತು ನೀಟ್​ ಪರೀಕ್ಷೆಗೆ ಸಲ್ಲಿಸಿದ ಅರ್ಜಿಗಳಲ್ಲಿ ದಾಖಲಿಸಿದ ವಿವರಗಳು ತಪ್ಪಾಗಿದ್ದರೆ ಅವನ್ನು ಸರಿಪಡಿಸಲು ಎನ್​ಟಿಎ ಮೇ 3ರವರೆಗೆ ಅವಕಾಶ ಮಾಡಿಕೊಟ್ಟಿತ್ತು.

ಪರೀಕ್ಷೆಗಳು ಯಾವಾಗ ನಡೆಯಬಹುದು ಎಂಬ ಬಗ್ಗೆ ಯಾವುದೇ ಸ್ಪಷ್ಟ ಮಾಹಿತಿ ನೀಡದ ಎನ್​ಟಿಎ, ಜೂನ್​ ಕೊನೆಯಲ್ಲಿ ಪರೀಕ್ಷೆಗಳು ನಡೆಯುವ ಸಾಧ್ಯತೆ ಇರುವುದಾಗಿ ಸುಳಿವು ನೀಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net