

ಬೆಂಗಳೂರು: ನಿತ್ಯೋತ್ಸವ ಕವಿ ಎಂದೇ ಕನ್ನಡ ಸಾರಸ್ವತ ಲೋಕದಲ್ಲಿ ಪ್ರಖ್ಯಾತರಾಗಿದ್ದ ಕೆ.ಎಸ್. ನಿಸಾರ್ ಅಹಮದ್ ನಿಧನದಿಂದ ಕನ್ನಡ ಸಾಹಿತ್ಯ ಲೋಕದ ಕೊಂಡಿಯೊಂದು ಕಳಚಿದಂತಾಗಿದೆ. ಕನ್ನಡ ಸಾಹಿತ್ಯ ಲೋಕದ ಮೇರು ವ್ಯಕ್ತಿಯಾಗಿದ್ದ ನಿಸಾರ್ ಅವರದ್ದು ಧರ್ಮವನ್ನು ಮೀರಿದ ವ್ಯಕ್ತಿತ್ವ. ಎಂದಿಗೂ ವಿವಾದಗಳನ್ನು ಮೈಮೇಲೆ ಎಳೆದುಕೊಂಡವರಲ್ಲ. ಅವರು ಬೆಳೆದು ಬಂದು ಹಾದಿ ಎಲ್ಲರಿಗೂ ಸ್ಪೂರ್ತಿದಾಯಕವಾದದ್ದು.
ನಿಸಾರ್ ಅವರ ಪೂರ್ಣ ಹೆಸರು ಕೊಕ್ಕರೆಹೊಸಳ್ಳಿ ಶೇಖಹೈದರ ನಿಸಾರ್ ಅಹಮದ್. ಬೆಂಗಳೂರು ಜಿಲ್ಲೆಯ ದೇವನಹಳ್ಳಿಯಲ್ಲಿ ಫೆ. 5 1936ರಲ್ಲಿ ಜನಿಸಿದರು. ಭೂವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದು, ವಿವಿಧ ಸರಕಾರಿ ಕಾಲೇಜುಗಳಲ್ಲಿ ಅಧ್ಯಾಪಕ ಹಾಗು ಪ್ರಾಧ್ಯಾಪಕರಾಗಿ ಕೆಲಸ ಮಾಡಿ ನಿವೃತ್ತರಾದರು. ನಿಸಾರ್ ಅವರಿಗೆ 10ನೇ ವಯಸ್ಸಿನಿಂದಲೇ ಸಾಹಿತ್ಯಾಸಕ್ತಿ ಚಿಗುರೊಡೆಯಿತು.
ಸಾಹಿತ್ಯ ಲೋಕದಲ್ಲಿ ಸಾಕಷ್ಟು ಕೊಡುಗೆ ನೀಡಿರುವ ನಿಸಾರ್ ಅವರಿಗೆ ಹಲವು ಪ್ರಶಸ್ತಿಗಳು ಸಹ ಒಲಿದುಬಂದಿವೆ. ಮನಸು ಗಾಂಧಿಬಜಾರು ಹಾಗು ನಿತ್ಯೋತ್ಸವ ನಿಸಾರ್ ಅವರ ಪ್ರಸಿದ್ಧ ಕವನ ಸಂಕಲನಗಳಾಗಿವೆ. 1978ರಲ್ಲಿ ಇವರ ಮೊದಲ ಭಾವಗೀತೆಗಳ ಧ್ವನಿಮುದ್ರಿಕೆ ನಿತ್ಯೋತ್ಸವ ಹೊರಬಂದು, ಕನ್ನಡ ಲಘುಸಂಗೀತ ಕ್ಷೇತ್ರದಲ್ಲಿ ಭರ್ಜರಿ ಯಶಸ್ಸು ಪಡೆಯಿತು. ಎಷ್ಟರ ಮಟ್ಟಿಗೆ ಅಂದರೆ ಇಂದಿಗೂ ನಿತ್ಯೋತ್ಸವ ಗೀತೆ ಹಸಿರಾಗಿದೆ. ಯಾವುದೇ ಶಾಲಾ ಕಾರ್ಯಕ್ರಮಗಳಾಗಿರಲಿ ಅಲ್ಲಿ ನಿತ್ಯೋತ್ಸವ ಗೀತೆಗೊಂದು ಸ್ಥಾನ ಇದ್ದೇ ಇರುತ್ತದೆ.
ಇನ್ನು ರಾಜಕಾರಣವನ್ನು ಪರಿಹಾಸ್ಯ ಮಾಡುವ "ಕುರಿಗಳು ಸಾರ್ ಕುರಿಗಳು" ವಿಡಂಬಣ ಕವನ ಸಹ ಪ್ರಸಿದ್ಧವಾಗಿದೆ. ಮನಸು ಗಾಂಧಿ ಬಜಾರು, ನೆನೆದವರ ಮನದಲ್ಲಿ, ಸಂಜೆ ಐದರ ಮಳೆ, ನಾನೆಂಬ ಪರಕೀಯ, ನವೋಲ್ಲಾಸ, ನಿತ್ಯೋತ್ಸವ ಸೇರಿದಂತೆ ಸಾಕಷ್ಟು ಕೃತಿಗಳನ್ನು ಪಡೆದಿರುವ ನಿಸಾರ್ ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಪದ್ಮಶ್ರೀ ಪ್ರಶಸ್ತಿ ಸೇರಿದಂತೆ ಅನೇಕ ಗೌರವಗಳು ಲಭಿಸಿವೆ.
ಶಿವಮೊಗ್ಗದೊಂದಿಗೆ ನಿಕಟ ಸಂಪರ್ಕ ಹೊಂದಿದ್ದ ಕವಿ
2006ರ ಡಿಸೆಂಬರಿನಲ್ಲಿ ಶಿವಮೊಗ್ಗದಲ್ಲಿ ನಡೆದ 73ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. 1967 ರಿಂದ 72 ಹಾಗೂ 1975-78ರವರೆಗೆ ಶಿವಮೊಗ್ಗ ಸಹ್ಯಾದ್ರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿದ್ದರು. 2010ರಲ್ಲಿ ಕುವೆಂಪು ವಿವಿ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಿತ್ತು. ಶಿವಮೊಗ್ಗದಲ್ಲಿದ್ದ ಸಂದರ್ಭದಲ್ಲಿ ಅವರು ಜೋಗ ಜಲಪಾತ ಕುರಿತು ರಚಿಸಿದ ನಿತ್ಯೋತ್ಸವ ಕವಿತೆ ಸಾಕಷ್ಟು ಮನ್ನಣೆ ಪಡೆಯಿತು.