ಅಗಲಿದ ನಿತ್ಯೋತ್ಸವ ಕವಿಗೆ ಸ್ಯಾಂಡಲ್​ವುಡ್​ ನಮನ

nisar
Published on

ಬೆಂಗಳೂರು: ಕನ್ನಡದ ಹಿರಿಯ ಸಾಹಿತಿ ಡಾ. ಕೆ.ಎಸ್​. ನಿಸಾರ್​ ಅಹಮ್ಮದ್ (84) ನಿಧನದ ಬೆನ್ನಲ್ಲೇ ಸ್ಯಾಂಡಲ್​ವುಡ್​ನ ಹಲವು ಕಲಾವಿದರು ಅಗಲಿದ ಕವಿಗೆ ನಮನ ಸಲ್ಲಿಸಿದ್ದಾರೆ. ನಟರಾದ ಪುನೀತ್​ ರಾಜ್​ ಕುಮಾರ್​, ಉಪೇಂದ್ರ, ಪ್ರೇಮ್​, ಸತೀಶ್​ ನೀನಾಸಂ, ವಸಿಷ್ಠ ಸಿಂಹ ಸೇರಿ ಹಲವರು ಸಂತಾಪ ಸೂಚಿಸಿದ್ದಾರೆ. ನಿರ್ದೇಶಕರಾದ ಪವನ್​ ಒಡೆಯರ್​, ಸಿಂಪಲ್​ ಸುನಿ ನಿತ್ಯೋತ್ಸವ ಕವಿಯನ್ನು ನೆನೆದಿದ್ದಾರೆ.

ನಟ ಉಪೇಂದ್ರ ಟ್ವಿಟ್​ ಮೂಲಕ ‘ಕನ್ನಡದ ಹಿರಿಯ ಸಾಹಿತಿ, ನಿತ್ಯೋತ್ಸವದ ಕವಿ, ಕನ್ನಡ ಸಾಹಿತ್ಯ ಲೋಕದ ದಿಗ್ಗಜ, ಕನ್ನಡ ಪರ ಚಿಂತಕ, ನಾಡೋಜ ಶ್ರೀ ಕೆ ಎಸ್ ನಿಸಾರ್ ಅಹಮ್ಮದ್ ರವರ ಅಗಲಿಕೆ ಕನ್ನಡ ಸಾಹಿತ್ಯ ಪ್ರಪಂಚಕ್ಕೆ ತುಂಬಲಾರದ ನಷ್ಟ. ಅವರ ಕುಟುಂಬವರ್ಗ, ಅಭಿಮಾನಿ ಬಳಗಕ್ಕೆ ದುಃಖ ಭರಿಸುವ ಶಕ್ತಿ ಲಭಿಸಲಿ. ಓಂ ಶಾಂತಿ...’ ಎಂದು ಸ್ಮರಿಸಿದ್ದಾರೆ.

ಪುನೀತ್​ ರಾಜ್​ಕುಮಾರ್ ‘ನಿತ್ಯೋತ್ಸವ ಸಾಲುಗಳು ನೀಡಿದ ಕನ್ನಡದ ಮಹಾನ್ ಕವಿ ಪದ್ಮಶ್ರೀ ಕೆ. ಎಸ್. ನಿಸಾರ್ ಅಹಮ್ಮದ್ ಸರ್ ಇನ್ನಿಲ್ಲ! ಸಾಹಿತ್ಯಲೋಕಕ್ಕೆ ಅವರ ಕೊಡುಗೆ ಅಜರಾಮರ!’ ಎಂದಿದ್ದಾರೆ.

ಬೆಂಗಳೂರಿನ ಪದ್ಮನಾಭ ನಗರದಲ್ಲಿರುವ ನಿವಾಸದಲ್ಲಿ ಭಾನುವಾರ ಮಧ್ಯಾಹ್ನ ಕೊನೆಯುಸಿರೆಳೆದ ನಿಸಾರ್​, ವಯಸ್ಸಹಜ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ, ಆರೋಗ್ಯದಲ್ಲಿ ಚೇತರಿಕೆ ಕಂಡುಬಾರದೆ, ನಿಧನರಾದರೆಂದು ಅವರ ಕುಟುಂಬದ ಮೂಲಗಳು ತಿಳಿಸಿವೆ. ನಿತ್ಯೋತ್ಸವ ಕವಿ ಎಂದೇ ಅವರು ಕನ್ನಡ ಸಾರಸ್ವತ ಲೋಕದಲ್ಲಿ ಪ್ರಖ್ಯಾತರಾಗಿದ್ದರು. ಅವರು ಫೆ.5 1936ರಂದು ದೇವನಹಳ್ಳಿಯಲ್ಲಿ ಜನಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net