

ಪುಣೆ: ಕರೆಂಟ್ ಬಿಲ್ ವಿಚಾರವಾಗಿ ಶುರುವಾದ ಗಲಾಟೆ ಮಹಿಳೆ ಒಬ್ಬರ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಮಹಾರಾಷ್ಟ್ರದ ಪುಣೆ ಜಿಲ್ಲೆಯ ಬಾರಾಮತಿ ತಾಲ್ಲೂಕಿನಲ್ಲಿ ನಡೆದಿದೆ. ಮೃತರನ್ನು ರಿಂಕು ಥಿಟೆ (26) ಎಂದು ಗುರುತಿಸಲಾಗಿದ್ದು, ಆರೋಪಿ ಅಭಿಜಿತ್ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಘಟನೆ ಕುರಿತು ಪ್ರತಿಕ್ರಿಯಿಸಿರುವ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು, ಆರೋಪಿ ಅಭಿಜಿತ್ ಪೋಟೆ ಈ ಹಿಂದೆ 570 ರೂಪಾಯಿಗಳ ಕರೆಂಟ್ ಬಿಲ್ ಬಂದಿದೆ ಎಂದು ಆರೋಪಿಸಿ ಸರಿಪಡಿಸುವಂತೆ MSEDCL ಅಧಿಕಾರಿಗಳ ಬಳಿ ಮನವಿ ಮಾಡಿದ್ದ. ಇದಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳು ಯಾವುದೇ ಕ್ರಮ ಜರುಗಿಸಿರಲಿಲ್ಲ.
ಇದರಿಂದ ಕುಪಿತಗೊಂಡ ಆರೋಪಿಯು ಬುಧವಾರ (ಏಪ್ರಿಲ್ 24) ಈ ಬಗ್ಗೆ ಮತ್ತೊಮ್ಮೆ ಮಾತನಾಡಲು MSEDCL ಕಚೇರಿಗೆ ಆಗಮಿಸಿದ್ದ. ಈ ವೇಳೆ ಕಚೇರಿಯಲ್ಲಿದ್ದ ರಿಂಕು ಥಿಟೆ ಅವರ ಬಳಿ ತನಗಾದ ಸಮಸ್ಯೆಯನ್ನು ಹೇಳಿಕೊಂಡಿದ್ದಾನೆ. ಇದಕ್ಕೆ ಸಂಬಂಧಿಸಿದಂತೆ ಅಧಿಕಾರಿ ವಿವರಣೆ ನೀಡುವ ವೇಳೆ ಆರೋಪಿಯು ಏಕಾಏಕಿ ಹರಿತವಾದ ಆಯುಧದಿಂದ ಆಕೆ ಮೇಲೆ ದಾಳಿ ಮಾಡಿದ್ದಾನೆ. ಕೂಡಲೇ ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಆಕೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಘಟನೆ ಸಂಬಂಧ ಆರೋಪಿ ಅಭಿಜಿತ್ನನ್ನು ವಶಕ್ಕೆ ಪಡೆಯಲಾಗಿದ್ದು, ಬಂಧಿತನ ವಿರುದ್ಧ ಭಾರತ ದಂಡ ಸಂಹಿತೆ (IPC Section) 302 ಸೇರಿದಂತೆ ವಿವಿಧ ಸೆಕ್ಷನ್ಗಳ ಅಡಿ ಪ್ರಕರಣ ದಾಖಲಿಸಿಕೊಂಡು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.