ಒಂದೇ ವರ್ಷದ ಜೈಲು ಶಿಕ್ಷೆ ತಪ್ಪಿಸೋದಕ್ಕೆ ಡೆತ್​ ಸರ್ಟಿಫಿಕೇಟ್​ ಕೊಟ್ಟ!

jail
Published on

ನ್ಯೂಯಾರ್ಕ್​: ಒಂದೇ ಒಂದು ವರ್ಷದ ಜೈಲು ಶಿಕ್ಷೆ ಅನುಭವಿಸುವುದಕ್ಕೆ ಸಿದ್ಧನಿಲ್ಲದ ಕಳ್ಳನೊಬ್ಬ ವಕೀಲರ ಮೂಲಕ ಡೆತ್​ ಸರ್ಟಿಫಿಕೇಟ್ ಅನ್ನು ಕೋರ್ಟ್​ಗೆ ಹಾಜರುಪಡಿಸಿದ! ಅದರಲ್ಲಿದ್ದ ಸ್ಪೆಲ್ಲಿಂಗ್ ಮಿಸ್ಟೇಕ್ಸ್ ನೋಡಿ ಸಂದೇಹಗೊಂಡ ಜಡ್ಜ್​, ಸರ್ಟಿಫಿಕೇಟನ್ನೇ ಪರಿಶೀಲನೆಗೊಪ್ಪಿಸಿದ್ರು!

ಕಳ್ಳನ ಹೆಸರು ರಾಬರ್ಟ್​ ಬರ್ಗರ್​. ವಯಸ್ಸು 25. ಆತ ಕಳ್ಳತನ ಪ್ರಕರಣವೊಂದರ ಅಪರಾಧಿ. ಈ ಸಂಬಂಧ ವಿಚಾರಣೆ ನಡೆದು ಒಂದು ವರ್ಷ ಜೈಲು ಶಿಕ್ಷೆ ಕೂಡ ಜನವರಿಯಲ್ಲಿ ಘೋಷಣೆಯಾಗಿತ್ತು. ಆದರೆ ಆತ ಕಳೆದ ಅಕ್ಟೋಬರ್ ತಿಂಗಳಿಂದ ತಲೆಮರೆಸಿಕೊಂಡು ತಿರುತ್ತಿದ್ದಾನೆ. ಶತಾಯ ಗತಾಯ ಜೈಲು ಶಿಕ್ಷೆಯಿಂದ ಪಾರಾಗಬೇಕು ಎಂಬುದು ಆತನ ಇರಾದೆಯಾಗಿತ್ತು.

ಈ ಪ್ರಯತ್ನದ ನಡುವೆ ತನ್ನ ಇಚ್ಛೆಗೆ ತಕ್ಕಂತೆ ವಕೀಲರ ಮನಸ್ಸನ್ನೂ ಆತ ಒಲಿಸಿಕೊಂಡುಬಿಟ್ಟ. ನಕಲಿ ಡೆತ್ ಸರ್ಟಿಫಿಕೇಟ್ ಅನ್ನು ಕೋರ್ಟ್​ನಲ್ಲಿ ಸಲ್ಲಿಸುವಂತೆ ಮನವಿ ಮಾಡಿದ್ದ. ಆ ಸರ್ಟಿಫಿಕೇಟ್ ಹೇಗಿತ್ತು ಎಂದರೆ ನ್ಯೂಜೆರ್ಸಿಯ ಡಿಪಾರ್ಟ್​ಮೆಂಟ್ ಆಫ್ ಹೆಲ್ತ್​ ವೈಟಲ್ ಸ್ಟ್ಯಾಟಿಸ್ಟಿಕ್ಸ್ ಆ್ಯಂಡ್ ರೆಜಿಸ್ಟ್ರಿ ನೀಡಿರುವ ಮರಣ ಪ್ರಮಾಣ ಪತ್ರದಂತೆಯೇ ಇತ್ತು. ಒಂದೇ ಒಂದು ತಪ್ಪಾಗಿತ್ತು. Registry ಬದಲು “Regsitry" ಎಂದಾಗಿತ್ತು. ಇದೊಂದೇ ಸಾಕಾಯ್ತು ಪ್ರಮಾಣ ಪತ್ರ ನಕಲಿ ಎನ್ನೋದಕ್ಕೆ.ಫಾಂಟ್ ಸೈಸ್​ನಲ್ಲೂ ವ್ಯತ್ಯಾಸವಿತ್ತು.ಇಲಾಖೆ ಕೂಡ ಪ್ರಮಾಣಪತ್ರ ನಕಲಿ ಎಂಬುದನ್ನು ದೃಢೀಕರಿಸಿತು.

ಮಂಗಳವಾರ ಈ ಪ್ರಕರಣದ ವಿಚಾರಣೆ ನಡೆಸಿದ ಕೋರ್ಟ್ ಬರ್ಗರ್​ಗೆ ಒಂದು ಡಾಲರ್ ಠೇವಣಿಯೊಂದಿಗೆ ಜಾಮೀನು ನೀಡಿ, ಜುಲೈ 29ಕ್ಕೆ ವಿಚಾರಣೆ ಮುಂದೂಡಿತು.ಈ ಪ್ರಕರಣದಲ್ಲಿ ಅಪರಾಧ ಸಾಬೀತಾದರೆ ಹಳೆಯ ಒಂದು ವರ್ಷದ ಜೈಲು ಶಿಕ್ಷೆ ಜೊತೆಗೆ ಇನ್ನೂ ನಾಲ್ಕು ವರ್ಷ ಜೈಲು ಶಿಕ್ಷೆ ಅನುಭವಿಸಬೇಕಾದೀತು ಬರ್ಗರ್.(ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net