

ದೆಹಲಿ: ಮೊಸಳೆ ಬಂತು ಮೊಸಳೆ ಎಂಬ ಕಥೆಯನ್ನು ಸಾಮಾನ್ಯವಾಗಿ ಎಲ್ಲರೂ ಕೇಳಿರುತ್ತಾರೆ. ಅಲ್ಲಿ ಮನುಷ್ಯನೊಬ್ಬ ಮೊಸಳೆಯ ಹೆಸರು ಹೇಳಿ ಸುಳ್ಳು ಹೇಳಿ ಕೊನೆಗೆ ತಾನೇ ಅದಕ್ಕೆ ಬಲಿಯಾಗುತ್ತಾನೆ. ಅದೇ ರೀತಿ ಇಲ್ಲೊಬ್ಬ ವ್ಯಕ್ತಿ ಮೊಸಳೆಯನ್ನು ಕಂಡು ತಾನೇ ಮೋಸ ಹೋಗಿ, ಅಪಾಯಕ್ಕೆ ಸಿಲುಕಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಫಿಲಿಪ್ಪೈನ್ಸ್ನ ಕಗಾಯೆನ್ ಡಿ ಒರೊ ಸಿಟಿ ಎಂಬಲ್ಲಿನ ಅಮ್ಯೂಸ್ಮೆಂಟ್ ಪಾರ್ಕ್ನಲ್ಲಿ ಇಂಥದ್ದೊಂದು ಘಟನೆ ಸಂಭವಿಸಿದೆ. ನೆಹೆಮಿಯಾಸ್ ಚಿಪಾಡ ಎಂಬ 68 ವರ್ಷದ ವ್ಯಕ್ತಿ ನ. 10ರಂದು ತನ್ನ ಜನ್ಮದಿನಾಚರಣೆ ಸಲುವಾಗಿ ಕುಟುಂಬದೊಂದಿಗೆ ಈ ಪಾರ್ಕ್ಗೆ ಬಂದಿದ್ದ. ಅಲ್ಲಿನ ಕೊಳವೊಂದರಲ್ಲಿ ಇದ್ದ ಮೊಸಳೆಯನ್ನು ಕಂಡು ಆತ ತಪ್ಪು ಭಾವಿಸಿ ಎಡವಟ್ಟು ಮಾಡಿಕೊಂಡಿದ್ದೇ ಇಷ್ಟಕ್ಕೆಲ್ಲ ಕಾರಣ.
ಕೊಳದಲ್ಲಿರುವು ಮೊಸಳೆಯ ಪ್ರತಿಕೃತಿ ಎಂದು ಭಾವಿಸಿದ ಆತ ನೀರಿಗಿಳಿದು ಸೆಲ್ಫಿ ತೆಗೆದುಕೊಳ್ಳಲು ಮುಂದಾಗಿದ್ದ. ಆಗ ಮೊಸಳೆ ದಾಳಿ ಮಾಡಿ ಕಚ್ಚಿಕೊಂಡಾಗಲೇ ಆತನಿಗೆ ಸತ್ಯ ಅರ್ಥವಾಗಿದ್ದು. ಸುಮಾರು 12 ಅಡಿ ಉದ್ದದ ಬೃಹತ್ ಮೊಸಳೆ ಆತನ ಮೇಲೆರಗಿ ಕಚ್ಚಿ ಹಿಡಿದಿದೆ. ಆತ ಕೂಗಿ ಕೊಸರಾಡಿ ಅದು ಹೇಗೋ ಪ್ರಾಣಾಪಾಯದಿಂದ ಬಚಾವಾಗಿದ್ದಾನೆ.
ಮೊಸಳೆ ದಾಳಿಯಿಂದ ಆತನ ಮೂಳೆ ಮುರಿತಕ್ಕೊಳಗಾಗಿದ್ದು, ಎಡತೋಳು ಹಾಗೂ ತೊಡೆಯಲ್ಲಿ ಹೊಲಿಗೆ ಹಾಕಿಸುವಷ್ಟು ದೊಡ್ಡ ಗಾಯಗಳಾಗಿದ್ದು, ತೀವ್ರ ರಕ್ತಸ್ರಾವವಾಗಿದೆ. ಅಮ್ಯೂಸ್ಮೆಂಟ್ ಪಾರ್ಕ್ ಸಿಬ್ಬಂದಿ ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಮ್ಯೂಸ್ಮೆಂಟ್ ಪಾರ್ಕ್ನವರು ಸರಿಯಾದ ಸೂಚನಾ ಫಲಕ ಅಳವಡಿಸಿದ್ದರೆ ಸೆಲ್ಫಿಗೆ ಮುಂದಾಗುತ್ತಿರಲಿಲ್ಲ ಎಂದು ಕುಟುಂಬದವರು ಆರೋಪಿಸಿದ್ದಾರೆ. -ಏಜೆನ್ಸೀಸ್